ADVERTISEMENT

ಗಾಂಧಿಗಂಜ್‍ನಲ್ಲಿ 1 ಸಾವಿರ ಮಾಸ್ಕ್ ಉಚಿತ ವಿತರಣೆ

ಜಿಲ್ಲಾಡಳಿತ ಅಭಿಯಾನಕ್ಕೆ ಕೈಜೋಡಿಸಿದ ದಿ ಗ್ರೇನ್‌ ಮರ್ಚಂಟ್ಸ್‌ ಅಸೋಸಿಯೇಶನ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 13:13 IST
Last Updated 23 ಜುಲೈ 2020, 13:13 IST
ಬೀದರ್‌ನ ಗಾಂಧಿಗಂಜ್‌ನಲ್ಲಿ ದಿ ಗ್ರೇನ್‌ ಆ್ಯಂಡ್‌ ಸೀಡ್ಸ್‌ ಮರ್ಚಂಟ್ಸ್ ಅಸೋಸಿಯೇಶನ್‌ ಅಧ್ಯಕ್ಷ ಬಸವರಾಜ ಧನ್ನೂರು ಗುರುವಾರ ಗುಮಾಸ್ತರಿಗೆ ಮಾಸ್ಕ್‌ ವಿತರಿಸಿದರು
ಬೀದರ್‌ನ ಗಾಂಧಿಗಂಜ್‌ನಲ್ಲಿ ದಿ ಗ್ರೇನ್‌ ಆ್ಯಂಡ್‌ ಸೀಡ್ಸ್‌ ಮರ್ಚಂಟ್ಸ್ ಅಸೋಸಿಯೇಶನ್‌ ಅಧ್ಯಕ್ಷ ಬಸವರಾಜ ಧನ್ನೂರು ಗುರುವಾರ ಗುಮಾಸ್ತರಿಗೆ ಮಾಸ್ಕ್‌ ವಿತರಿಸಿದರು   

ಬೀದರ್: ಕೊರೊನಾ ಸೋಂಕು ಹರಡುವಿಕೆ ತಡೆಗೆ ‘ಮಾಸ್ಕ್ ಬಳಸಿ, ಕೊರೊನಾ ಓಡಿಸಿ’ ಶೀರ್ಷಿಕೆಯಡಿ ಜಿಲ್ಲಾ ಆಡಳಿತ ನಡೆಸುತ್ತಿರುವ ಜಾಗೃತಿ ಅಭಿಯಾನಕ್ಕೆ ಇಲ್ಲಿಯ ಪ್ರಮುಖ ಮಾರುಕಟ್ಟೆ ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಕೈಜೋಡಿಸಿದೆ.

ಗಾಂಧಿಗಂಜ್‍ನಲ್ಲಿ ಕೆಲಸ ಮಾಡುವ ಗುಮಾಸ್ತರು, ಹಮಾಲರು ಹಾಗೂ ಮಹಿಳಾ ಕಾರ್ಮಿಕರು ಸೇರಿ ಒಂದು ಸಾವಿರ ಮಂದಿಗೆ ಅಸೋಸಿಯೇಶನ್ ಗುರುವಾರ ಮಾಸ್ಕ್ ಉಚಿತ ವಿತರಿಸಿದೆ. ಕೊರೊನಾ ಸೋಂಕು ತಡೆಯುವಲ್ಲಿ ಮಾಸ್ಕ್ ಮಹತ್ವವನ್ನೂ ಮನದಟ್ಟು ಮಾಡಿಕೊಟ್ಟಿದೆ.

ಗಾಂಧಿಗಂಜ್ ಜಿಲ್ಲೆಯ ಪ್ರಮುಖ ಮಾರುಕಟ್ಟೆ ಆಗಿರುವ ಕಾರಣ ನಿತ್ಯ ಸಾವಿರಾರು ರೈತರು, ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ. ಅಂಗಡಿಗಳಲ್ಲಿ ಸಾಕಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಸುರಕ್ಷತೆಯ ಹಿತದೃಷ್ಟಿಯಿಂದ ಅಸೋಸಿಯೇಶನ್‍ನಿಂದ ಗಾಂಧಿಗಂಜ್‍ನಲ್ಲಿ ಕೆಲಸ ಮಾಡುವ ಒಂದು ಸಾವಿರ ಜನರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಗಾಂಧಿಗಂಜ್‍ನಲ್ಲಿ ಮಾಸ್ಕ್ ವಿತರಣೆಗೆ ಚಾಲನೆ ನೀಡಿದ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ADVERTISEMENT

ಉತ್ತಮ ಗುಣಮಟ್ಟದ ಕಾಟನ್ ಬಟ್ಟೆಯಿಂದ ತಯಾರಿಸಿರುವ ಮಾಸ್ಕ್‌ಗಳು ಬಹು ದಿನಗಳವರೆಗೆ ಬಾಳಿಕೆಗೆ ಬರಲಿವೆ. ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವಿಕೆಯನ್ನು ಶೇ 90 ರಷ್ಟು ನಿಯಂತ್ರಿಸಬಹುದು ಎಂದು ತಿಳಿಸಿದರು.

ಇದೀಗ ಹಿಂಗಾರಿನ ಸುಗ್ಗಿ ಆರಂಭವಾಗಲಿದೆ. ಕೊರೊನಾ ವೇಗವಾಗಿ ಹರಡುತ್ತಿರುವ ಕಾರಣ ಗಾಂಧಿಗಂಜ್‍ನಲ್ಲಿ ಅಂಗಡಿಗಳ ಮಾಲೀಕರು ಮಾಸ್ಕ್ ಧರಿಸಿಕೊಂಡೇ ವ್ಯವಹಾರ ಮಾಡಬೇಕು. ತಮ್ಮ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಯೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಈ ಮೂಲಕ ಕೊರೊನಾ ತಡೆಗೆ ಜಿಲ್ಲಾಡಳಿತ ಹಾಗೂ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸಿದ್ದಲ್ಲಿ ಮಾತ್ರ ಕೊರೊನಾವನ್ನು ತಡೆಯಬಹುದಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಲಹೆ ಮಾಡಿದರು.

ಅಸೋಸಿಯೇಶನ್ ಕಾರ್ಯದರ್ಶಿ ಭಗವಂತ ಔದತಪುರ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಭಂಡೆ, ಸೋಮನಾಥ ಗಂಗಶೆಟ್ಟಿ, ಗುಮಾಸ್ತರ ಸಂಘ ಹಾಗೂ ಹಮಾಲರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.