ADVERTISEMENT

ಬೀದರ್‌: 14ರವರೆಗೆ ಕೆಲ ಪ್ರದೇಶದಲ್ಲಿ ಸೀಲ್‌ಡೌನ್

ಓಲ್ಡ್‌ಸಿಟಿ ನಿವಾಸಿಗಳ ವೈದ್ಯಕೀಯ ತಪಾಸಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಮೇ 2020, 15:16 IST
Last Updated 8 ಮೇ 2020, 15:16 IST
ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ವಾಹನಗಳು ಸಂಚರಿಸಿದವು
ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ವಾಹನಗಳು ಸಂಚರಿಸಿದವು   

ಬೀದರ್‌: ಇಲ್ಲಿಯ ಓಲ್ಡ್‌ಸಿಟಿಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚು ಇರುವ ಕಾರಣ ಇಲ್ಲಿನ ಕೆಲ ಪ್ರದೇಶಗಳನ್ನು ಜಿಲ್ಲಾಡಳಿತ ಮೇ 14ರ ವರೆಗೆ ಸೀಲ್‌ಡೌನ್ ಮಾಡಲು ನಿರ್ಧರಿಸಿದೆ.

ಕೋವಿಡ್‌ 19 ಸೋಂಕು ಹರಡುವಿಕೆ ತಡೆಯಲು ಓಲ್ಡ್‌ಸಿಟಿಯಲ್ಲಿರುವ ಕೆಲ ಪ್ರದೇಶಗಳಲ್ಲಿ ವಾಸವಾಗಿರುವ ಜನರ ವೈದ್ಯಕೀಯ ತಪಾಸಣೆಗೆ ಆದೇಶ ನೀಡಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ತಪಾಸಣೆ ಮಾಡಲಾಗಿದೆ.

ಮನಿಯಾರ್ ತಾಲೀಂ, ಗೋಲೆಖಾನ್, ಅಹಮದ್ ಬಾಗ್, ಪಾತಾಳನಗರ, ದುಲ್ಹನ್ ದರ್ವಾಜಾ ಪ್ರದೇಶದಲ್ಲಿಯೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಈ ಪ್ರದೇಶಗಳನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಿ ಮೇ 14ರ ವರೆಗೆ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ.

ADVERTISEMENT

ಈಗಾಗಲೇ ಸೂಚಿಸಲಾದ ಪ್ರದೇಶದ ನಿವಾಸಿಗಳು ಯಾವುದೇ ಕಾರಣಕ್ಕೆ ಹೊರಗಡೆ ಸಂಚರಿಸಬಾರದು. ಲಾಕ್‌ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51ರ ಪ್ರಕಾರ ಮತ್ತು ಐಪಿಸಿ ಕಾಯ್ದೆ 269 ಮತ್ತು 271ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ ಎಚ್ಚರಿಕೆ ನೀಡಿದ್ದಾರೆ.

ರಂಜಾನ್‌ ಇರುವ ಕಾರಣ ಜನ ಓಲ್ಡ್‌ಸಿಟಿಯಲ್ಲಿ ಸಂಜೆಯಾಗುತ್ತಲೇ ಕೆಲವರು ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಪಡ್ಡೆ ಹುಡುಗರ ಓಡಾಟ ನಿಂತಿಲ್ಲ. ಹೀಗಾಗಿ ಒಂದು ವಾರದ ಅವಧಿಗೆ ಪೊಲೀಸ್‌ ಸರ್ಪಗಾವಲನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಖಾಜಿ ಕಾಲೊನಿ ಹಾಗೂ ಮಂಗಲಪೇಟ ಸಮೀಪದ ಇಡೇನ್‌ ಕಾಲೊನಿಯ ಮೇಲೂ ನಿಗಾ ಇಡಲಾಗಿದೆ.

ದಿನಸಿ ವಸ್ತುಗಳು, ತರಕಾರಿ ಹಾಗೂ ಮೆಡಿಕಲ್‌ಗಳಲ್ಲಿ ಔಷಧ ಖರೀದಿಗೆ ಯಾವುದೇ ನಿರ್ಬಂಧ ಹೇರಿಲ್ಲ. ತೋಟಗಾರಿಕೆ ಇಲಾಖೆಯ ವಾಹನಗಳು ಓಲ್ಡ್‌ಸಿಟಿಯಲ್ಲಿ ತರಕಾರಿ ಮಾರಾಟ ಮಾಡುತ್ತಿವೆ.

ಜಿಲ್ಲಾಧಿಕಾರಿ ಕಚೇರಿ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್‌ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತದ ವರೆಗಿನ ದ್ವಿಪಥ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮಾರ್ಗ ಮಧ್ಯೆ ಅಳವಡಿಸಲಾಗಿದ್ದ ಬ್ಯಾರಿಕೇಡ್‌ ಹಾಗೂ ರಸ್ತೆಗೆ ಅಡ್ಡಲಾಗಿ ಇಡಲಾಗಿದ್ದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲಾಗಿದೆ.

ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕೆಲವು ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೆಲವರು ಬೇಕರಿಗಳನ್ನು ತೆರೆಯಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ತೆರಳಿ ಬಂದ್‌ ಮಾಡಿಸಿದರು.

ಸಂಜೆಯಾಗುತ್ತಲೇ ನಗರದಲ್ಲಿ ಪೊಲೀಸ್‌ ವಾಹನಗಳು ಓಡಾಡುತ್ತಿವೆ. ಹೀಗಾಗಿ ವ್ಯಾಪಾರಿಗಳು ಸಂಜೆ 5 ಗಂಟೆಯ ವೇಳೆಗೆ ಅಂಗಡಿಗಳನ್ನು ಬಂದ್‌ ಮಾಡಿ ಮನೆಗಳಿಗೆ ತೆರಳುತ್ತಿದ್ದಾರೆ. ಗಾಂಧಿ ಗಂಜ್ ಪ್ರದೇಶದಲ್ಲೂ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.