ADVERTISEMENT

ಏಳು ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಆದೇಶ

ಸಾರ್ವಜನಿಕರ ಅನುಕೂಲಕ್ಕೆ ಸಹಾಯವಾಣಿ ಆರಂಭಿಸಿದ ಜಿಲ್ಲಾಡಳಿತ

ಚಂದ್ರಕಾಂತ ಮಸಾನಿ
Published 21 ಏಪ್ರಿಲ್ 2021, 16:52 IST
Last Updated 21 ಏಪ್ರಿಲ್ 2021, 16:52 IST
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆ
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆ   

ಬೀದರ್: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ನಂತರ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜಿಲ್ಲೆಯ ಮೂರು ಹೊಸ ತಾಲ್ಲೂಕುಗಳನ್ನು ಹೊರತು ಪಡಿಸಿ ಐದು ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು ಏಳು ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲು ಮುಂದಾಗಿದೆ.

ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಒಟ್ಟು 905 ಹಾಸಿಗೆಗಳ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಬೀದರ್‌ನ ನಾವದಗೇರಿಯ ಝೀರಾ ಕನ್ವೆನ್ಶನ್‌ ಹಾಲ್‌ನಲ್ಲಿ 200 ಹಾಸಿಗೆ, ಶಹಾಪುರ ಗೇಟ್ ಬಳಿಯ ಶಾಹಿನ್ ಪಿ.ಯು. ಕಾಲೇಜು ಕಟ್ಟಡದಲ್ಲಿ 115, ಗೋಲೇಖಾನಾದ ಶಾಹೀನ್‌ ಪಿ.ಯು. ಕಾಲೇಜು ಕಟ್ಟಡದಲ್ಲಿ 100, ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250, ಹುಮನಾಬಾದ್‌ನ ರಾಜ ರಾಜೇಶ್ವರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 50, ಔರಾದ್‌ನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ 90 ಹಾಗೂ ಭಾಲ್ಕಿಯ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಲಕ್ಷಣ ರಹಿತರಿಗೆ, ಡೆಡಿಕೇಟಿವ್ ಕೋವಿಡ್‌ ಹೆಲ್ತ್ ಸೆಂಟರ್‌ನಲ್ಲಿ ಸೌಮ್ಯದಿಂದ ಮಧ್ಯಮ ರೋಗ ಲಕ್ಷಣ ಹೊಂದಿರುವವರಿಗೆ ಹಾಗೂ ಡೆಡಿಕೇಟೆಡ್ ಕೋವಿಡ್‌ ಆಸ್ಪತ್ರೆಯಲ್ಲಿ ತೀವ್ರ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ. ಈ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ಔಷಧ, ವೆಂಟಿಲೇಟರ್‌ಗಳ ಬಗ್ಗೆಯೂ ವಿವರವಾದ ಮಾಹಿತಿ ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

‘ಬೀದರ್ ನಗರದ ಹಳೆಯ ಆಸ್ಪತ್ರೆಯಲ್ಲಿ 450 ಹಾಸಿಗೆಗಳು, ಹೊಸ ಆಸ್ಪತ್ರೆಯಲ್ಲಿ 100, ಔರಾದ್‌ ತಾಲ್ಲೂಕು ಆಸ್ಪತ್ರೆಯಲ್ಲಿ 50 ಹಾಗೂ ಹುಮನಾಬಾದ್‌ ತಾಲ್ಲೂಕು ಆಸ್ಪತ್ರೆಯಲ್ಲಿ 28 ಹಾಸಿಗೆಗಳು ಇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗಾಬರಿ ಪಡುವ ಅಗತ್ಯ ಇಲ್ಲ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಸ್ಪಷ್ಟಪಡಿಸಿದ್ದಾರೆ.

‘ಜಿಲ್ಲಾಧಿಕಾರಿ ನಿರ್ದೇಶನದಂತೆ ತಾಲ್ಲೂಕು ಕೇಂದ್ರಗಳಲ್ಲೂ ಕೋವಿಡ್‌ ಕೇರ್‌ ಸೆಂಟರ್‌ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ 18004254316 ಆರಂಭಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

‘ನಗರದಲ್ಲಿ ಮೆರವಣಿಗೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬಿದ್ದಿಲ್ಲ. ಕೆಲವರು ಈಗಲೂ ಜಾತ್ರೆ, ಜಯಂತಿ ಹೆಸರಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಇವುಗಳನ್ನು ನಿಯಂತ್ರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚಿಟ್ಟಾ ಒತ್ತಾಯಿಸಿದ್ದಾರೆ.

‘ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಬೇಕು. ಜನರ ಸಮಸ್ಯೆಗಳನ್ನು ಅರಿತು ತ್ವರಿತವಾಗಿ ಪರಿಹರಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.