ADVERTISEMENT

ಕೋವಿಡ್‌: 150ಕ್ಕೂ ಹೆಚ್ಚು ಜನ ಗುಣಮುಖ

ಆಮ್ಲಜನಕ, ಇಂಜಕ್ಷನ್ ನೀಡಲು ದುಂಬಾಲು: ಬೇಸರ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:52 IST
Last Updated 10 ಮೇ 2021, 5:52 IST
ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಬೀಳ್ಕೊಡಲಾಯಿತು
ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಬೀಳ್ಕೊಡಲಾಯಿತು   

ಹುಮನಾಬಾದ್: ‘ಕೊರೊನಾ ಸೋಂಕಿನಿಂದ 150ಕ್ಕೂ ಹೆಚ್ಚು ಜನರು ಗುಣಮುಖರಾಗಿ ಮರಳಿ ಮನೆಗಳಿಗೆ ತೆರಳುತ್ತಿರುವುದು ಸಂತಸ ತಂದಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ನಾಗನಾಥ ಹುಲಸೂರೆ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖ ಆದವರಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.

‘ವೈದ್ಯರು ಮತ್ತು ಸಿಬ್ಬಂದಿ ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದರೆ, ಸಾರ್ವಜನಿಕರು ಇಂತಹ ಸಂಕಷ್ಟ ಸಮಯದಲ್ಲಿ ಮುಂಜಾಗ್ರತೆ ವಹಿಸದೆ ಇರುವುದು ಬೇಸರ ತಂದಿದೆ’ ಎಂದು ಹೇಳಿದರು.

ADVERTISEMENT

‘ಸೋಂಕಿತರ ಸಂಬಂಧಿಕರಿಗೆ ಕೋವಿಡ್ ವಾರ್ಡ್‌ಗಳಲ್ಲಿ ಪ್ರವೇಶ ನಿಷೇಧವಿದ್ದರೂ ಒಳಗಡೆ ಬಂದು ಆಮ್ಲಜನಕ ನೀಡುವ ಪ್ರಮಾಣ ಹೆಚ್ಚು ಮಾಡುತ್ತಿರುವುದು ಅಪಾಯಕಾರಿ. ಏಕೆಂದರೆ ಯಾವ ರೋಗಿಗೆ ಎಷ್ಟು ಆಮ್ಲಜನಕ ಬೇಕೆಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಆದರೆ, ಕೆಲ ರೋಗಿಗಳ ಸಂಬಂಧಿಕರು ತಪ್ಪು ಕಲ್ಪನೆಯಿಂದ ಹೆಚ್ಚು ಆಮ್ಲಜನಕವನ್ನು ಮತ್ತು ರೆಮೆಡಿಸಿವಿರ್ ಇಂಜಕ್ಸನ್ ನೀಡಲು ದುಂಬಾಲು ಬೀಳುವುದು ಸರಿಯಲ್ಲ. ಸಾರ್ವಜನಿಕರು ಮತ್ತು ಸೋಂಕಿತರು ಧೈರ್ಯದಿಂದ ಇರಬೇಕು’ ಎಂದು ಸಲಹೆ ಮಾಡಿದರು.

ಡಿವೈಎಸ್‍ಪಿ ಸೋಮಲಿಂಗ ಕುಂಬಾರ ಮಾತನಾಡಿ, ‘ರೋಗಿಗಳ ಸಂಬಂಧಿಕರು ಕೋವಿಡ್ ವಾರ್ಡ್‌ಗಳಲ್ಲಿ ಹೋದರೆ ಎಫ್.ಐ.ಆರ್. ದಾಖಲು ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು. ಪಟ್ಟಣದಲ್ಲಿ ಅನವಶ್ಯಕವಾಗಿ ಓಡಾಡುವುದನ್ನು ಬಿಟ್ಟು ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷತೆ ಯಿಂದ ಇರಬೇಕು. ಕಟ್ಟುನಿಟ್ಟಾಗಿ ಕರ್ಫ್ಯೂ ನಿಯಮವನ್ನು ಪಾಲಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಡಾ.ರೋಹಿತ್‌ ರಘೋಜಿ, ಡಾ.ಅಶ್ವಿನಿ, ಪ್ರೀತಿ, ರುಕ್ಮಿಣಿ, ಅಮರಜೀತ್, ಶೇಷಮ್ಮ ಹಾಗೂ ಸಿಬ್ಬಂದಿ ಇದ್ದರು.

‘ವಿಜಯಪುರ, ಕಲಬುರ್ಗಿಯವರು’

ಬೆಡ್‍ಗಳು ಸಿಗದ ಕಾರಣ ವಿಜಯಪುರ, ಕಲಬುರ್ಗಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಬಂದ ಕೊರೊನಾ ಸೋಂಕಿತರು ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ಒಟ್ಟು 150 ಜನರು ಈ ಸೋಂಕಿನಿಂದ ಗುಣಮುಖ ಆಗಿದ್ದಾರೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.