ಬೀದರ್: ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಷ್ಟದ ಸಮೀಕ್ಷೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ಈಗಾಗಲೇ ಶೇ 50ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡದಿಂದ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಎರಡು ವಾರದೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ಶೀಘ್ರ ಪರಿಹಾರ ವಿತರಣೆಗೆ ಸಹಾಯಕವಾಗಲಿದೆ. ಚುರುಕಿನಿಂದ ಸಮೀಕ್ಷೆ ನಡೆಸಬೇಕೆಂದು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ಕೊಟ್ಟಿದ್ದರು. ಇದಾದ ನಂತರ ಮಳೆ ಕೂಡ ಬಿಡುವು ಕೊಟ್ಟಿದ್ದು, ಅಧಿಕಾರಿಗಳು ಸಕ್ರಿಯರಾಗಿದ್ದಾರೆ.
ಈಗಾಗಲೇ ಶೇ 50ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ₹85 ಕೋಟಿ ಹಾನಿ ಆಗಿರುವ ಮಾಹಿತಿ ಲಭ್ಯವಾಗಿದೆ. ಮನೆ, ಸೇತುವೆ, ಕೆರೆ, ಬೆಳೆ, ರಸ್ತೆ ಹಾನಿ ಇದರಲ್ಲಿ ಸೇರಿದೆ. ಜಿಲ್ಲೆಯಾದ್ಯಂತ 4.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಸದ್ಯ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಬಹುತೇಕ ಬೆಳೆ ಸತತ ಮಳೆಗೆ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮೀಕ್ಷೆ ಮುಗಿದ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಯಾ ಅವರೆ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಇನ್ನುಳಿದಂತೆ ತೊಗರಿ, ಕಬ್ಬು, ಉದ್ದು, ಹೆಸರು, ಹತ್ತಿ ಸೇರಿದತೆ ಇತರೆ ಬೆಳೆಗಳನ್ನು ಬೆಳೆಸಿದ್ದರು. ಬಹುತೇಕ ಎಲ್ಲ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿವೆ. ರೈತರಿಗೆ ಏನೂ ಉಳಿದಿಲ್ಲ.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಬಿಜೆಪಿಯ ಶಾಸಕರು, ರೈತ ಮುಖಂಡರು ವಿಳಂಬ ಮಾಡದೇ ಪರಿಹಾರ ಘೋಷಿಸಿ, ತಕ್ಷಣವೇ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ. ವಿವಿಧ ಸಂಘಟನೆಗಳು ಕೂಡ ಇದಕ್ಕೆ ದನಿಗೂಡಿಸಿದ್ದರಿಂದ ಒತ್ತಡ ಹೆಚ್ಚಿದೆ.
‘ಸಮೀಕ್ಷೆ ನಡೆಸುವುದರಲ್ಲಿ ಅರ್ಥವೇ ಇಲ್ಲ. ಸುಮಾರು ಎರಡು ವಾರ ಮಳೆ ಹಾಗೂ ಪ್ರವಾಹದ ನೀರು ಗದ್ದೆಗಳಲ್ಲಿ ಸಂಗ್ರಹಿಸಿ ಬೆಳೆ ಸಂಪೂರ್ಣ ಹಾಳಾಗಿದೆ. ಕೂಡಲೇ ಪರಿಹಾರ ಘೋಷಿಸಬೇಕು. ರೈತರು ಹಾಕಿದ ಬಂಡವಾಳವೂ ಕೈಸೇರಿಲ್ಲ. ದುರಂತವೆಂದರೆ ರೈತರ ಹೊಲಗಳ ಫಲವತ್ತಾದ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಳಂಬ ಮಾಡದೇ ಪರಿಹಾರ ಕೊಡಬೇಕು’ ಎಂದು ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಸಮಗ್ರ ಮಾಹಿತಿ
ಬೀದರ್ ಜಿಲ್ಲೆಯಾದ್ಯಂತ ಈಗಾಗಲೇ ಶೇ 50ರಷ್ಟು ಬೆಳೆ ಹಾನಿಯ ಸಮೀಕ್ಷೆ ಪೂರ್ಣಗೊಂಡಿದೆ. ಮುಂದಿನ 8ರಿಂದ 10 ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆ. ನಂತರ ಸರ್ಕಾರಕ್ಕೆ ಸಮಗ್ರ ಮಾಹಿತಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕನ ಮಾಡುತ್ತದೆ. ಬಳಿಕ ಪರಿಹಾರ ಘೋಷಿಸಲಾಗುತ್ತದೆ ಎಂದು ಬೀದರ್‌ನ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.