
ಬೀದರ್: ‘ಕುರಿಗಾಹಿಗಳಿಗೆ ಒದಗಿಸುವ ವಿವಿಧ ಸೌಲಭ್ಯಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಕೂಡಲೇ ಈ ತೀರ್ಮಾನದಿಂದ ಹಿಂದೆ ಸರಿಯಬೇಕು. ಶಾಸಕರನ್ನು ಕೈಬಿಡಬೇಕು’ ಎಂದು ಕುರಿ ಮತ್ತು ಮೇಕೆ ಮಹಾಮಂಡಳದ ರಾಜ್ಯ ನಿರ್ದೇಶಕ ಪಂಡಿತರಾವ್ ಚಿದ್ರಿ ಆಗ್ರಹಿಸಿದರು.
ರಾಜ್ಯದಲ್ಲಿರುವ ಸುಮಾರು 30 ನಿಗಮಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷರಾಗಿದ್ದಾರೆ. ಆದರೆ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಶಾಸಕರು ತಮ್ಮ ಕಾರ್ಯಕರ್ತರ ಮೂಲಕ ಅಥವಾ ಮುಖಂಡರ ಮೂಲಕ ಅನ್ಯರಿಗೆ ಜವಾಬ್ದಾರಿ ಒಪ್ಪಿಸುತ್ತಾರೆ. ನಿಜವಾದ ಕುರಿಗಾಹಿಗಳಿಗೆ, ಕುರಿಗಾಹಿ ಸಂಘ ಸಂಸ್ಥೆಗಳ ಫಲಾನುಭವಿಗಳಿಗೆ ಸೌಲಭ್ಯ ಸಿಗುವುದು ವಿರಳ. ಕೂಡಲೇ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಶಾಸಕರನ್ನು ಕೈಬಿಟ್ಟು ಈ ಹಿಂದಿನಂತೆ ಜಿಪಂ ಸಿಇಒ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ, ಕುರಿಗಾಹಿಗಳಿಗೆ ಸೌಲಭ್ಯ ಒದಗಿಸಬೇಕೆಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುರಿಗಾಹಿಗಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಕುರಿ ಮತ್ತು ಮೇಕೆ ಸಂಘಗಳ ಹಾಗೂ ಮಹಾಮಂಡಳ ಪದಾಧಿಕಾರಿಗಳ ಸಭೆ ಕರೆದು ಇದರ ಸಾಧಕ ಬಾಧಕ ಕುರಿತು ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಪಂಡಿತರಾವ್ ಚಿದ್ರಿ ತಿಳಿಸಿದರು.
ಕರ್ನಾಟಕ ಸಹಕಾರ ಉಣ್ಣೆ, ಕೈಮಗ್ಗ ಮತ್ತು ನೇಕಾರರ ಮಹಾಮಂಡಳ ಚಳ್ಳಕೆರೆಯ ನಿರ್ದೇಶಕ ಶಿವರಾಜ ಮಲ್ಲೇಶಿ, ಪ್ರಮುಖರಾದ ಚಂದ್ರಕಾಂತ ನೇಳಗೆ, ಲೋಕೇಶ ಜಬಾಡೆ, ಅಮೃತ್ ವಗ್ಗೆ, ಶಾಮರಾವ್ ರಕ್ಷ್ಯಾಳ್, ಅಶೋಕ್ ಹಳೆಂಬುರ್, ಶ್ರೀನಿವಾಸ್ ಮೇತ್ರೆ, ಬಾಲಾಜಿ ಜಬಾಡೆ, ನರಸಿಂಗ್ ಸೋನಾಳ, ಸಂಜುಕುಮಾರ್ ಅಲ್ಲೂರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.