ADVERTISEMENT

ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 13:38 IST
Last Updated 9 ಫೆಬ್ರುವರಿ 2021, 13:38 IST
ಬೀದರ್‌ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದ ತೊಳೆದು ಪೂಜೆ ಮಾಡಿದರು
ಬೀದರ್‌ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದ ತೊಳೆದು ಪೂಜೆ ಮಾಡಿದರು   

ಬೀದರ್: ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ನಡೆದ ‘ಪಾಲಕರನ್ನು ಗೌರವಿಸಿ ಸಂಸ್ಕೃತಿ ಉಳಿಸಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ಮಾಡಿದರು.

ಶಾಲೆಗೆ ತಂದೆ-ತಾಯಿಯನ್ನು ಕರೆದುಕೊಂಡು ಬಂದಿದ್ದ ವಿದ್ಯಾರ್ಥಿಗಳು ಅವರನ್ನು ಕುರ್ಚಿ ಮೇಲೆ ಕೂರಿಸಿ, ಪಾದ ತೊಳೆದು, ಪುಷ್ಪ ಅರ್ಪಿಸಿ ನಮಸ್ಕರಿಸಿದರು. ಸಂಸ್ಥೆ ಪ್ರಮುಖರು ಶಾಲು ಹೊದಿಸಿ ಪಾಲಕರನ್ನು ಗೌರವಿಸಿದರು.

ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ‘ಮಕ್ಕಳು ಮೊಬೈಲ್ ನಂಟು ಹೆಚ್ಚು ಬೆಳೆಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿ ಮರೆಯುತ್ತಿದ್ದಾರೆ.
ಅವರಿಗೆ ಸರಿಯಾದ ಮಾರ್ಗ ತೋರುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಕೊಡಬೇಕು. ಉತ್ತಮ ನಾಗರಿಕನಿಗೆ ಅಗತ್ಯವಾದ ಗುಣಗಳನ್ನು ಬೆಳೆಸಬೇಕು. ಮಕ್ಕಳು ನಿತ್ಯ ಪಾಲಕರನ್ನು ವಂದಿಸಿ, ಆಶೀರ್ವಾದ ಪಡೆದುಕೊಳ್ಳಬೇಕು. ಹಾಗಾದಲ್ಲಿ ಮಾತ್ರ ದೇಶದ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ’ ಎಂದು ತಿಳಿಸಿದರು.

‘ಪಾಲಕರನ್ನು ಗೌರವಿಸಿ ಸಂಸ್ಕೃತಿ ಉಳಿಸಿ’ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅನೇಕ ಪಾಲಕರು, ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲಾಗುತ್ತಿದೆ ಎಂದು ಹೇಳಿದರು.

ಶಾಲೆ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.