
ಹುಲಸೂರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆ 15ನೇ ಹಣಕಾಸು ಯೋಜನೆ ಮಾರ್ಗಸೂಚಿ ಹಾಗೂ ಕೆಟಿಪಿಪಿ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹುಲಸೂರ ಪಿಡಿಒ ರಮೇಶ ಮಿಲಿಂದಕರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಜಿ.ಪಂ ಸಿಇಒ ಡಾ.ಗಿರೀಶ ಬದೋಲೆ ಆದೇಶಿಸಿದ್ದಾರೆ.
ಕಳೆದ ಸಾಲಿನಲ್ಲಿ ನಡೆದ 38 ಕಾಮಗಾರಿಗಳ ಪೈಕಿ, 34 ಕಾಮಗಾರಿಗಳನ್ನು ಗ್ರಾ.ಪಂ ಸದಸ್ಯರ ಗಮನಕ್ಕೆ ತರದೇ, ಸಾಮಾನ್ಯ ಸಭೆ ಹಾಗೂ ತುರ್ತು ಸಭೆಯಲ್ಲಿ ಚರ್ಚಿಸಿಲ್ಲ. ಕಾಮಗಾರಿಗಳಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. ಆದರೂ ಮನಬಂದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸದಸ್ಯರಿಗೆ ಮಾಹಿತಿ ನೀಡದೇ ಇ-ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ ಅಪಲೋಡ್ ಮಾಡಲಾಗಿದೆ. ಜಿ.ಪಂ ಕಚೇರಿಯಲ್ಲೂ ಪರಿಶೀಲನೆಗೆ ಒಳಪಡಿಸಿಲ್ಲ. ಅಲ್ಲದೆ, ನಗದು ಹಾಗೂ ಸಭೆ ನಡಾವಳಿ ಪುಸ್ತಕ, ದಾಸ್ತಾನು ನಿರ್ವಹಿಸಿಲ್ಲ. ಅಲ್ಲದೆ ಕೆಟಿಟಿಪಿ ಹಾಗೂ ಪಂಚಾಯತ್ ಅಧಿನಿಯಮ ಉಲ್ಲಂಘಿಸಿರುವುದು, ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಂಟಿ ಪರಿಶೀಲನೆ ವರದಿಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದರು. ಪಿಡಿಒ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮದಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.