ಬೀದರ್: ‘ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ನೈತಿಕ ದಿವಾಳಿಯಾಗಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನೀಡಿರುವ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ.
‘ಖೂಬಾ ಅವರು ಅವರ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್, 12 ರಾಷ್ಟ್ರೀಯ ಹೆದ್ದಾರಿಗಳು, ಹತ್ತಾರು ರೈಲುಗಳು, ಪಾಸ್‌ಪೋರ್ಟ್ ಕಚೇರಿ, ಸಿಪೆಟ್ ಕಾಲೇಜು, ರೈಲು ನಿಲ್ದಾಣ ಮೇಲ್ದರ್ಜೆ ಸೆರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅವರ ನೈತಿಕತೆ ಪ್ರಶ್ನಿಸುತ್ತಿರುವುದು ಖಂಡನೀಯ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ್ ಬುಧವಾರ ಖಾರವಾಗಿ ಪ್ರತಿಕ್ರಿಯಿಸಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಿಮಗೆ ನಿಜವಾದ ನೈತಿಕತೆ ಇದ್ದರೆ ನಿಮಗೆ ಪ್ರಶ್ನೆ ಕೇಳಿದ ನಿಮ್ಮ ಪಕ್ಷದ ವಿಧಾನ ಪರಿಷತ್ ಸದಸ್ಯರ ಕುಟುಂಬದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಟಂಬದಲ್ಲಿ ಎಷ್ಟೆಷ್ಟು ಅಧಿಕಾರಗಳಿವೆ ಎಂದು ಕೇಳಬೇಕು? ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾವಾಗುತ್ತಿಲ್ಲವೆ? ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ, ಬಿಡಿಎ ಅಧ್ಯಕ್ಷರಾಗಿ ಎರಡೆರಡು ಹುದ್ದೆಗಳನ್ನು ಪಡೆದು ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ನಿಮ್ಮ ಪಕ್ಷದವರೇ ನಿಮ್ಮ ವಿರುದ್ಧ ಹೇಳಿದ್ದಾರೆ. ಇದನ್ನು ಗಮನಿಸಿದರೆ ನಿಮ್ಮ ಪಕ್ಷದಲ್ಲಿಯೇ ನಿಮಗೆ ಯಾವುದೇ ಕಿಮ್ಮತ್ತಿಲ್ಲ ಎನ್ನುವುದು ತಿಳಿಯುತ್ತದೆ’ ಎಂದು ಕುಹುಕವಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವ ಕೈಗೊಂಬೆಯಾಗಿದ್ದಾರೆ ಎಂದು ತಮ್ಮದೇ ಪಕ್ಷದ ಶಾಸಕರು ಹೇಳಿದ್ದಾರೆ. ಸಚಿವರಿಗೆ ಖುಷಿ ಪಡಿಸಿಲು ಕಾಂಗ್ರೆಸ್ ಅಧ್ಯಕ್ಷರು ಈ ರೀತಿಯ ಹೇಳಿಕೆ ನೀಡಿದ್ದಾರೆ ಅನಿಸುತ್ತಿದೆ. ಅಕ್ರಮ ಭೂ ಕಬಳಿಕೆದಾರರ ವಿರುದ್ದ ಕ್ರಮ ಕೈಗೊಂಡಿದ್ದರೆ ಬಿಜೆಪಿ ಸ್ವಾಗತಿಸುತ್ತದೆ. ಆದರೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಭಾಲ್ಕಿಯ ಬಿಜೆಪಿಗೆ ಸೇರಿದ ದಲಿತ ಕಾರ್ಯಕರ್ತ ಸಂಜು ಶಿಂಧೆ ಸೇರಿದಂತೆ ಹಲವರ ವಿರುದ್ದ ರಾಜಕೀಯ ಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಯಾವುದೇ ಪ್ರಕರಣದಲ್ಲಿ ಶಿಕ್ಷೆ ಆಗದಿದ್ದರೂ ಅವರ ಹೆಸರನ್ನು ರೌಡಿಶೀಟಟ್ ಪಟ್ಟಿಗೆ ಸೇರಿಸಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಗಡಿಪಾರು ಮಾಡಲು ಜಿಲ್ಲಾಧಿಕಾರಿ ಮೂಲಕ ನೋಟಿಸ್ ಕೊಡಿಸಿರುವುದು ಎಷ್ಟು ಸಮಂಜಸ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಉತ್ತರಿಸಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ದಿನ ಬೆಳಗಾದರೆ ಕೊಲೆ, ದರೋಡೆ ಪ್ರಕರಣಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಕ್ಲಬ್‌ಗಳು ತಲೆ ಎತ್ತುತ್ತಿವೆ. ಮರಳು ಮಾಫಿಯಾ, ಅಕ್ರಮ ಕಳ್ಳ ಸಾಗಾಟದ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯುವ ಕೆಲಸ ಮಾಡಬೇಕಿತ್ತು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಖಚಿತ ಎಂದು ಹೇಳಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿರುವುದು ಅವರು ಗಮನಿಸಿದಂತೆ ಕಾಣಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಕರ್ನಾಟಕ ಹಾಗೂ ಬೀದರ್ ಜನತೆ ಇವರ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ನಿರ್ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.