ADVERTISEMENT

ದೇಗುಲ, ಮಠಕ್ಕೆ ಸೌಕರ್ಯ ಒದಗಿಸುವಂತೆ ಸೂಚಿಸಿ

ಸಮಾಜ ಸೇವಕ ಗುರುನಾಥ ವಡ್ಡೆಯವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 12:32 IST
Last Updated 3 ಡಿಸೆಂಬರ್ 2021, 12:32 IST
ಗುರುನಾಥ ವಡ್ಡೆ
ಗುರುನಾಥ ವಡ್ಡೆ   

ಕಮಲನಗರ: ಭಾಲ್ಕಿ ತಾಲ್ಲೂಕಿನ ಲಖನಗಾಂವ ಗ್ರಾಮದ ಚಕ್ರಕೋಟಿ ಬಾಯವ್ವ ಮಠ ಹಾಗೂ ಕಾಕನಾಳದ ಸೋಮೇಶ್ವರ ಮಂದಿರಕ್ಕೆ ರಸ್ತೆ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಮಾಜ ಸೇವಕ ಗುರುನಾಥ ವಡ್ಡೆ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ಅವರು ಈ ಸಂಬಂಧ ನ.8 ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿ, ‘ಮಾಂಜ್ರಾ ನದಿ ದಡದ ಮೇಲಿರುವ ಚಕ್ರಕೋಟಿ ಬಾಯವ್ವ ಮಠ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ನಿರಂತರವಾಗಿ ದಾಸೋಹ ಸೇವೆ ನಡೆಯುತ್ತದೆ. ಆದರೆ, ಸಮರ್ಪಕವಾದ ರಸ್ತೆ ಇಲ್ಲ. ನಿರಂತರ ವಿದ್ಯುತ್‌ ವ್ಯವಸ್ಥೆಯೂ ಇಲ್ಲ. ಭಕ್ತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಕಾಕನಾಳದ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೂ ಮೂಲ ಸೌಕರ್ಯ ಇಲ್ಲ. ರಸ್ತೆ ನಿರ್ಮಿಸಿ, ನಿರಂತರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದರು.

ಸರ್ಕಾರ ಸ್ಪಂದಿಸದ ಕಾರಣ ಡಿ.1 ರಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಎರಡೂ ಕ್ಷೇತ್ರಗಳಿಗೆ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ADVERTISEMENT

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಗುಲಬರ್ಗಾ ವಿದ್ಯುತ್‌ಚ್ಛಕ್ತಿ ಸರಬರಾಜು ಕಂಪನಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.