ADVERTISEMENT

ಬೀದರ್‌ | ಎಲ್ಲ ಹೋರಾಟಗಳಿಗೆ ಸಾಹಿತ್ಯವೇ ಬುನಾದಿ: ಎನ್‌. ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:01 IST
Last Updated 26 ಜನವರಿ 2026, 7:01 IST
ಪುಸ್ತಕ ಸಂತೆಯ ಅಂಗವಾಗಿ ಭಾನುವಾರ ಬೀದರ್‌ನಲ್ಲಿ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ರಾಜಕೀಯ’ ಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಮಾತನಾಡಿದರು
ಪುಸ್ತಕ ಸಂತೆಯ ಅಂಗವಾಗಿ ಭಾನುವಾರ ಬೀದರ್‌ನಲ್ಲಿ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ರಾಜಕೀಯ’ ಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಮಾತನಾಡಿದರು   

ಬೀದರ್‌: ‘ಎಲ್ಲ ರೀತಿಯ ಹೋರಾಟಗಳಿಗೆ ಸಾಹಿತ್ಯವೇ ಭದ್ರ ಬುನಾದಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ತಿಳಿಸಿದರು.

ವೀರಲೋಕ ಬುಕ್ಸ್‌, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿರುವ ವೀರಲೋಕ ‘ಪುಸ್ತಕ ಸಂತೆ’ಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ರಾಜಕೀಯ’ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯಾವುದೇ ರೀತಿಯ ಚಳವಳಿಯಿರಲಿ ಅದಕ್ಕೆ ಸಾಹಿತ್ಯವೇ ದಿಕ್ಕು ದಿಸೆ ಕೊಡುವ ಶಕ್ತಿ ಹೊಂದಿದೆ. ಇದು ನನ್ನ ವೈಯಕ್ತಿಕ ಅನುಭವ. ನಾನು ಈ ಹಿಂದೆ ಎಸ್‌ಎಫ್‌ಐನಲ್ಲಿ ಕಾರ್ಯಕರ್ತನಾಗಿದ್ದೆ. ಆನಂತರ ಎಬಿವಿಪಿಯಲ್ಲಿ ತೊಡಗಿಸಿಕೊಂಡೆ. ಸದ್ಯ ಬಿಜೆಪಿಯಲ್ಲಿರುವೆ. ವಿದ್ಯಾರ್ಥಿ ಹೋರಾಟ, ರಾಜಕೀಯ ಹೋರಾಟ ಎಲ್ಲದಕ್ಕೂ ದಿಕ್ಕು ಕೊಡುವ ಶಕ್ತಿ ಸಾಹಿತ್ಯದಲ್ಲಿದೆ ಎಂದು ಹೇಳಿದರು.

ADVERTISEMENT

ಆಯಾ ಕಾಲಕ್ಕೆ ಹೋರಾಟದ ವಿಷಯ, ಸ್ವರೂಪಗಳು ಬದಲಾಗುತ್ತಿರುತ್ತವೆ. ಆದರೆ, ಅದಕ್ಕೆ ದಿಕ್ಕು ಕೊಡುವುದೇ ಸಾಹಿತ್ಯ. ಘೋಷಣೆ, ಭಾಷಣ ಎಲ್ಲವೂ ಸಾಹಿತ್ಯದ ಮೂಲವೇ ಆಗಿದೆ ಎಂದು ತಿಳಿಸಿದರು.

ನಟ ಅಶ್ವಥ್‌ ನೀನಾಸಂ ಮಾತನಾಡಿ, ನಮ್ಮ ಮಾತುಗಳಿಂದ ಬರುವ ಪ್ರತಿ ಮಾತು ಕೂಡ ಸಾಹಿತ್ಯವೇ ಆಗಿದೆ. ಪಂಪ, ರನ್ನನ ಸಾಹಿತ್ಯ ನನ್ನನ್ನು ನಟನೆಯತ್ತ ಕೊಂಡೊಯ್ದಿದೆ. ಜೊತೆಗೆ ಸಾಮಾಜಿಕ ಬದ್ಧತೆ ಕೂಡ ಬೆಳೆಸಿರುವುದು ವಿಶೇಷ ಎಂದು ಹೇಳಿದರು.

ಸಾಹಿತ್ಯವೂ ಸಾಮಾಜಿಕ ಪ್ರಜ್ಞೆ ಬೆಳೆಸಿ, ಅದರೊಂದಿಗೆ ಪ್ರತಿಸ್ಪಂದಿಸುವ ಗುಣವೂ ಕಲಿಸಿಕೊಡುತ್ತದೆ. ಎಲ್ಲದರ ಮೂಲ ಸಾಹಿತ್ಯ ಎಂದು ಹೇಳಿದರೆ ತಪ್ಪಾಗಲಾರದು.

ಕುಸುಮಾ ಆಯರಹಳ್ಳಿ, ಸಾಹಿತ್ಯಕ್ಕೆ ರಾಜಕಾರಣಿಗಳ ಕೊಡುಗೆಯೂ ಬಹಳ ದೊಡ್ಡದಿದೆ. ಅವರ ಉದ್ದೇಶ ಏನೇ ಆಗಿರಬಹುದು. ಆದರೆ, ಅವರ ಪ್ರತಿ ಮಾತುಗಳಲ್ಲಿ ಸಾಹಿತ್ಯ ಇರುತ್ತದೆ ಎಂದರು.

ರಮೇಶ ದೊಡ್ಡಪುರ ಕಾರ್ಯಕ್ರಮ ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್‌ ಪಾಟೀಲ್‌, ಬೀದರ್‌ ಮಹಾನಗರ ಪಾಲಿಕೆಯ ಸದಸ್ಯ ಶಶಿಧರ ಹೊಸಳ್ಳಿ, ರಾಜಕುಮಾರ್‌ ಪಸಾರ, ಧನರಾಜ ಹಂಗರಗಿ, ಆದೀಶ್‌ ವಾಲಿ ಹಾಜರಿದ್ದರು.

ದೇವನೂರ ಮಹಾದೇವ ಬಸಲಿಂಗಪ್ಪನವರ ಸಾಹಿತ್ಯದ ಓದಿನಿಂದಲೇ ನಾನು ಹೋರಾಟದ ಹಾದಿ ಹಿಡಿದವನು. ಅವರೇ ನನಗೆ ಸ್ಫೂರ್ತಿ.
ಎನ್‌. ರವಿಕುಮಾರ್‌ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ
ರಾಜಕಾರಣಿಗಳು ಹುಟ್ಟಿಕೊಳ್ಳುವುದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳು ಆಂದೋಲನಗಳಿಂದ. ಇದರಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ.
ಸಂಗಮೇಶ ಯುವ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.