ADVERTISEMENT

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸಿ’

ಜಿಲ್ಲೆಯ ವಿವಿಧೆಡೆ ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸಭೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 5:01 IST
Last Updated 28 ಏಪ್ರಿಲ್ 2021, 5:01 IST
ಕೋವಿಡ್ ಅಂಕಿ ಅಂಶ
ಕೋವಿಡ್ ಅಂಕಿ ಅಂಶ   

ಭಾಲ್ಕಿ: ತಾಲ್ಲೂಕಿನಲ್ಲಿ ಕೋವಿಡ್ ತಡೆಗೆ ಎಲ್ಲ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಕೊರೊಣಾ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ತಡೆ ಕುರಿತು ಮಂಗಳವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲ್ಲೂಕು ಪಂಚಾಯಿತಿ ಮುಖ್ಯಸ್ಥರು ಕೋವಿಡ್ ನಿಯಂತ್ರಣಕ್ಕೆ ಹಿಂದಿನಂತೆ ಆಸಕ್ತಿ ತೋರುತ್ತಿಲ್ಲ. ಹಾಗಾಗಿ, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಾವುಗಳು ಕೂಡ ಹೆಚ್ಚಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿ ಜತೆ ಸೇರಿ ಮೊದಲಿನಂತೆ ಸಕ್ರಿಯವಾಗಿ ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಗ್ರಾಮೀಣ ಭಾಗಗಳಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ಪಿಡಿಒ, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೇರಿ ಮೂಡಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಇಓ ದೀಪಿಕಾ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿರುವ ಕುರಿತು ಸಚಿವರ
ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಿವರಾಜ ಪಾಟೀಲ ಇದ್ದರು.

‘ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿ’

ಹುಮನಾಬಾದ್: ಪಟ್ಟಣದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಸೋಂಕಿತರಿಗೆ ಯಾವುದೇ ರೀತಿಯ ಸಮಸ್ಯಗಳಾಗದಂತೆ ತಾಲ್ಲೂಕು ಆಡಳಿತ ಸ್ತೂಕವಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲಲ್ಇ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಲು ಪ್ರೇರೆಪಿಸಬೇಕು. ಜನದಟ್ಟಣೆ ಉಂಟಾಗುವ ಕಾರ್ಯಕ್ರಮಗಳನ್ನು ಆಯೋಜಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡಿದರು.

‘ಲಸಿಕೆ ಪಡೆಯಲು ಜನರ ಹಿಂದೇಟು’

ಬಸವಕಲ್ಯಾಣ: ನಗರದ ಧರ್ಮಪ್ರಕಾಶ ಓಣಿಯಲ್ಲಿನ ಇಬ್ಬರು ಕೋವಿಡ್ ಲಸಿಕೆ ಪಡೆದ ಮರುದಿನ ಆಸ್ಪತ್ರೆಗೆ ದಾಖಲಾಗಿ ನಿಧನ ಹೊಂದಿರುವ ಕಾರಣವನ್ನು ಮುಂದೆ ಮಾಡಿ ಅಲ್ಲಿನ ನಿವಾಸಿಗಳು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಗೋಳು ತೋಡಿಕೊಂಡರು.

ನಗರಸಭೆ ಸದಸ್ಯ ಮಾರುತಿ ಲಾಡೆ ಹಾಗೂ ಅವರ ಜತೆಯಲ್ಲಿರುತ್ತಿದ್ದ ಇನ್ನೊಬ್ಬರು ಮೃತಪಟ್ಟವರು. ಈ ಘಟನೆಯ ನಂತರ ಆ ಓಣಿಗೆ ಹೋಗಿ ಜಾಗೃತಿ ಕೈಗೊಳ್ಳಲಾಯಿತು. ಲಸಿಕೆಯಿಂದ ಯಾವುದೇ ಹಾನಿ ಇಲ್ಲ. ಕೋವಿಡ್ ತಪಾಸಣೆಯಿಂದ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದು ಮನವರಿಕೆ ಮಾಡಿದರೂ ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಪೌರಾಯುಕ್ತ ಗೌತಮಬುದ್ಧ ಕಾಂಬಳೆ ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಜಿ.ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಠಾಕೂರ, ಎಇಇ ಶಿವಕುಮಾರ ಬುದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.