ADVERTISEMENT

ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 14:58 IST
Last Updated 8 ಡಿಸೆಂಬರ್ 2025, 14:58 IST
<div class="paragraphs"><p>ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ</p></div>

ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

   

ಬೀದರ್‌: ಸೂರ್ಯನ ಕಿರಣಗಳು ನೆಲ ಚುಂಬಿಸುತ್ತಿದ್ದಂತೆ ಮಂಜು ಸರಿದು ಎಲ್ಲೆಡೆ ಬೆಳಕು ಹರಿದಿತ್ತು. ಚುಮು, ಚುಮು ಚಳಿಯ ನಡುವೆಯೇ ವಿದ್ಯಾರ್ಥಿಗಳ ಕಲರವ, ಸಮಾಗಮದಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರಕ್ಕೆ ಸೋಮವಾರ ವಿಶೇಷ ಕಳೆ ಬಂದಿತು...

ಬೀದರ್‌ ವಲಯದ ‘ಪ್ರಜಾವಾಣಿ’ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಉತ್ಸಾಹದಿಂದ ರಂಗಮಂದಿರದತ್ತ ಹೆಜ್ಜೆ ಹಾಕಿದರು. ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ತೋರಿ ವಿಜೇತರಾಗುವ ಬಯಕೆ, ಅತ್ಯುತ್ಸಾಹ ಅವರ ಕಂಗಳಲ್ಲಿ ಇಣುಕುತ್ತಿತ್ತು. ನಗರ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತದೇಕಚಿತ್ತದಿಂದ ಲಿಖಿತ ಪರೀಕ್ಷೆಯನ್ನು ಎದುರಿಸಿದರು. ಒಂದು ಕಡೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದರೆ, ಇನ್ನೊಂದೆಡೆ ಲಿಖಿತ ಪರೀಕ್ಷೆಯ ಎಲ್ಲಾ 20 ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದಲೇ ಉತ್ತರ ಕಂಡುಕೊಂಡು ಸಮಾಧಾನಕರ ಬಹುಮಾನ ವಿತರಿಸಲಾಯಿತು. ಈ ವೇಳೆ ಯಾವ ಪ್ರಶ್ನೆಗೆ, ಯಾವುದು ಸರಿ ಉತ್ತರ ಎಂದು ಖಾತ್ರಿಯಾಗುತ್ತಿದ್ದಂತೆ ಕೆಲವರ ಮೊಗದಲ್ಲಿ ಮಂದಹಾಸ, ಮತ್ತೆ ಕೆಲವರಲ್ಲಿ ನಿರಾಸೆ ಕಾಣಿಸಿತು. ಇಷ್ಟೆಲ್ಲದರ ನಡುವೆ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾದ ತಂಡಗಳ ಹೆಸರು ಘೋಷಿಸಿದ ನಂತರ ಸಂಬಂಧಿಸಿದ ಶಾಲೆಗಳವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಶಿಳ್ಳೆ, ಕೇಕೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಐದು ಸುತ್ತಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಎದುರಾದ ವಿವಿಧ ರೀತಿಯ ಪ್ರಶ್ನೆಗಳು, ಅವುಗಳ ಸರಿ ಉತ್ತರ ತಿಳಿದು, ಸ್ಪರ್ಧೆಗೆ ಭವಿಷ್ಯದಲ್ಲಿ ಯಾವ ರೀತಿ ಸಜ್ಜಾಗಬೇಕೆಂದು ತಿಳಿದು, ಮನದಟ್ಟು ಮಾಡಿಕೊಂಡು ತಲೆದೂಗಿದರು. ಸ್ಪರ್ಧೆಯಲ್ಲಿ ಸರಿ ಉತ್ತರ ಹೇಳಿದವರಿಗೆ ಚಪ್ಪಾಳೆ ಹೊಡೆದು ಹುರಿದುಂಬಿಸಿದರು.

ADVERTISEMENT

ಕಲಬುರಗಿ ಎಸ್‌ಬಿಆರ್‌ ಪಬ್ಲಿಕ್‌ ಶಾಲೆ ಪ್ರಥಮ

ಕಲಬುರಗಿಯ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ (ಎಸ್‌ಬಿಆರ್‌) ವಿದ್ಯಾರ್ಥಿಗಳಾದ ಬಸವಪ್ರಸಾದ್‌ ಹಾಗೂ ಶ್ರೇಯಸ್‌ ಅವರ ತಂಡ (80 ಅಂಕ) ಉತ್ತಮ ಸಾಧನೆ ತೋರಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಶಾಲೆ ವಿದ್ಯಾರ್ಥಿಗಳಾದ ನಮನ್‌ ಹಾಗೂ ಆರ್ಯನ್‌ ತಂಡ (60 ಅಂಕ) ದ್ವಿತೀಯ ಹಾಗೂ ಕಲಬುರಗಿಯ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ರಾಮಚಂದ್ರ ಹಾಗೂ ವಿನಯ್‌ ಅವರ (28 ಅಂಕ) ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹5 ಸಾವಿರ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ₹3 ಸಾವಿರ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ₹2 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ನೀಡಿದರು.

ಶರಣಬಸವೇಶ್ವರ ರೆಸಿಡೆನ್ಸಿಯಲ್‌ ಪಬ್ಲಿಕ್‌ ಶಾಲೆಯ ನರಸಿಂಹ ಹಾಗೂ ಭಾಗ್ಯಶ್ರೀ ತಂಡ25 ಅಂಕಗಳೊಂದಿಗೆ ನಾಲ್ಕನೇ, ಜ್ಞಾನಸುಧಾ ವಿದ್ಯಾಲಯದ ಮಹಿಕಾ ಹಾಗೂ ರೋಹಿಣಿ ತಂಡ 15 ಅಂಕ ಮತ್ತು ಕಲಬುರಗಿಯ ದಿ ಅಪ್ಪ ಪಬ್ಲಿಕ್‌ ಶಾಲೆಯ ಭಾಗೇಶ್‌ ಮತ್ತು ವಿನೋದ್‌ ತಂಡ 5 ಅಂಕ ಗಳಿಸಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಗಳಿಸಿದವು.

ಮೊದಲ ಸುತ್ತಿನಿಂದ ನಾಲ್ಕನೇ ಸುತ್ತಿನ ವರೆಗೆ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ನಮನ್‌ ಮತ್ತು ಆರ್ಯನ್‌ ಉತ್ತಮ ಸಾಧನೆ ತೋರಿ ಮುನ್ನಡೆ ಗಳಿಸಿದ್ದರು. ಆದರೆ, ಕೊನೆಯ ಹಾಗೂ ಐದನೇ ಸುತ್ತಿನಲ್ಲಿ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ಬಸವಪ್ರಸಾದ್‌ ಹಾಗೂ ಶ್ರೇಯಸ್‌ ಉತ್ತಮ ಸಾಧನೆ ತೋರಿ ಸ್ಪರ್ಧೆಯಲ್ಲಿ ಜಯಶಾಲಿಯಾದರು. ಬೀದರ್‌ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ 20 ಪ್ರಶ್ನೆಗಳಿಗೆ ಲಿಖಿತ ಪರೀಕ್ಷೆ ನಡೆಸಿ, ರಸಪ್ರಶ್ನೆಗೆ ಆಯ್ಕೆ ಮಾಡಲಾಯಿತು.

ವಿಜೇತರಿಗೆ ಚೆಕ್‌ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಡಾ. ಗಿರೀಶ್‌ ಬದೋಲೆ, ಶಾಲೆಗಳಲ್ಲಿ ಈ ರೀತಿ ರಸಪ್ರಶ್ನೆ ಸ್ಪರ್ಧೆಗಳಾದರೆ ಕ್ರಿಯಾಶೀಲರಾಗಿ ಓದಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ಪುಸ್ತಕ ಓದುತ್ತೇವೆ. ಆದರೆ, ರಸಪ್ರಶ್ನೆಯಿಂದ ಹೆಚ್ಚಿನ ಜ್ಞಾನಾರ್ಜನೆಗೆ ಅನುಕೂಲ. ಈ ರೀತಿಯ ಸ್ಪರ್ಧೆಯಿಂದ ಸೃಜನಶೀಲತೆ, ಗ್ರಹಿಕೆ, ಜ್ಞಾನವನ್ನು ಒರೆಗೆ ಹಚ್ಚಲು ಪ್ರೇರೇಪಿಸುತ್ತದೆ. ಆದಕಾರಣ ಮಕ್ಕಳು ಈ ರೀತಿಯ ಸ್ಪರ್ಧೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌, ಡಿಡಿಪಿಐ ಸುರೇಶಗೌಡ, ಬಸವ ಕಾಯಕ ದಾಸೋಹ ಫೌಂಡೇಶನ್‌ ಅಧ್ಯಕ್ಷ ಬಸವರಾಜ ಧನ್ನೂರ ಹಾಜರಿದ್ದರು.

ಬೆಳಿಗ್ಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯ ಹಾಗೂ ಸಿರ್ಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಣೇಶ ಅವರೊಂದಿಗೆ ಜ್ಯೋತಿ ಬೆಳಗಿಸಿ ರಸಪ್ರಶ್ನೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ಈ ತರಹದ ರಸಪ್ರಶ್ನೆ ಕಾರ್ಯಕ್ರಮಗಳಾಗುವುದು ಬಹಳ ಮುಖ್ಯ. ಏಕೆಂದರೆ ಇದು ಗಡಿ ಜಿಲ್ಲೆ. ಇಲ್ಲಿನ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಜ್ಞಾನ ಹೆಚ್ಚಾಗಲಿದೆ ಎಂದರು.

‘ಪ್ರಜಾವಾಣಿ’ ಕಲಬುರಗಿ ವಿಭಾಗದ ಬ್ಯೂರೊ ಮುಖ್ಯಸ್ಥ ವಿನಾಯಕ್‌ ಭಟ್‌, ಕಲಬುರಗಿ ಜಾಹೀರಾತು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಕಾಶ್‌ ಮುಗಳಿ, ಬೀದರ್‌ ಜಿಲ್ಲಾ ಪ್ರತಿನಿಧಿ ದೇವೇಂದ್ರ ಕರಂಜೆ, ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್‌ ನಾಯಕ, ಕಲಬುರಗಿಯ ವ್ಯವಸ್ಥಾಪಕ ಬಸಪ್ಪ ಎಲ್‌. ಮಗದುಂ, ಬೀದರ್‌ ಜಿಲ್ಲಾ ಪ್ರಸರಣ ಪ್ರತಿನಿಧಿ ಉಮಾಕಾಂತ ಧಾಕಲಿ ಹಾಜರಿದ್ದರು.

ರಸಪ್ರಶ್ನೆ ಸ್ಪರ್ಧೆಯು ಬಸವ ಕಾಯಕ ದಾಸೋಹ ಫೌಂಡೇಶನ್‌, ಒರ್ಕಿಡ್ಸ್‌ ಇಂಟರ್‌ ನ್ಯಾಷನಲ್‌ ಸ್ಕೂಲ್, ಬ್ಯಾಂಕಿಂಗ್ ಪಾರ್ಟನರ್‌ –ಎಸ್‌ಬಿಐ, ರಿಫ್ರೆಶ್‌ಮೆಂಟ್‌ ಪಾರ್ಟನರ್‌ ಮೊಗು–ಮೊಗು, ಸ್ಪೆಷಲ್ ಪಾರ್ಟನರ್‌ - ಭೀಮ, ನ್ಯೂಟ್ರಿಷನ್ ಪಾರ್ಟನರ್‌ - ನಂದಿನಿ, ಇನ್‌ ಅಸೋಸಿಯೇಷನ್ ವಿಥ್‌ - ಪೂರ್ವಿಕಾ, ವಿಐಪಿಎಸ್‌, ಟ್ಯಾಲೆಂಟ್‌ ಸ್ಪ್ರಿಂಟ್‌, ಐಸಿಎಸ್‌ ಮಹೇಶ್‌ ಪಿಯು ಕಾಲೇಜು, ಸೂಪರ್‌ ಬ್ರೈನ್‌, ಮಾರ್ಗದರ್ಶಿ, ದಿ ಟೀಮ್‌ ಅಕಾಡೆಮಿ, ಐಬಿಎಮ್‌ಆರ್‌, ಮಂಗಳೂರು ಪಿಯು ಕಾಲೇಜು, ಶಾರದಾ ವಿದ್ಯಾ ಮಂದಿರ, ಟಿವಿ ಪಾರ್ಟನರ್‌ ಏಷಿಯಾನೆಟ್‌ ಸುವರ್ಣ ನ್ಯೂಸ್‌ ಸಹಯೋಗದಲ್ಲಿ ಜರುಗಿತು.

ಆಡಿಯನ್ಸ್‌ ರೌಂಡ್‌ನಲ್ಲಿ ಸರಿ ಉತ್ತರ ಹೇಳಿ ಸಮಾಧಾನಕರ ಬಹುಮಾನ ಪಡೆದವರ ವಿವರ ಹೀಗಿದೆ...

ಜನವಾಡ ಆದರ್ಶ ವಿದ್ಯಾಲಯದ ಸುಮಾಂಜಲಿ, ಭಾಲ್ಕಿ ಗುರುಪ್ರಸಾದ್‌ ಶಾಲೆಯ ಸುಮಿತ್‌, ಬೀದರ್‌ ಅರುಣೋದಯ ಶಾಲೆಯ ವೀರೇಶ್‌, ಬೀದರ್‌ ಜ್ಞಾನಸುಧಾ ವಿದ್ಯಾಲಯದ ಮಹಿಕಾ, ಕಲಬುರಗಿ ಎಸ್‌ಬಿಆರ್‌ನ ಸೃಜನ್‌, ಬೀದರ್‌ ಜಾಯ್‌ ಪಬ್ಲಿಕ್‌ ಶಾಲೆಯ ವೀರ್‌, ಕರಡ್ಯಾಳ ಗುರುಕುಲದ ಸಂಸ್ಕೃತಿ, ಕಲಬುರಗಿ ಎಸ್‌ಬಿಆರ್‌ಯ ಆದಿತ್ಯ, ಜ್ಞಾನಸುಧಾ ವಿದ್ಯಾಲಯದ ಸಾಯಿನಾಥ, ಕರಡ್ಯಾಳ ಗುರುಕುಲದ ಸಂಸ್ಕೃತಿ, ಮರಕಲ್‌ ಸರ್ಕಾರಿ ಶಾಲೆಯ ಶಿಲ್ಪಾರಾಣಿ, ಬೀದರ್‌ ಕೇಂದ್ರೀಯ ವಿದ್ಯಾಲಯದ ಪ್ರಣವ್‌, ಜ್ಞಾನಸುಧಾ ವಿದ್ಯಾಲಯದ ಅರ್ಣವ್‌, ಬೀದರ್‌ ವಿದ್ಯಾರಣ್ಯ ಪ್ರೌಢಶಾಲೆಯ ಐಶ್ವರ್ಯ, ಜ್ಞಾನಸುಧಾ ಶಾಲೆಯ ರೋಹಿಣಿ, ಕಲಬುರಗಿ ಎಸ್‌ಬಿಆರ್‌ನ ಬಸವಪ್ರಸಾದ್‌, ಬೀದರ್‌ ವೀರೇಂದ್ರ ಶಾಲೆಯ ಸೃಷ್ಟಿ, ಕಲಬುರಗಿ ಎಸ್‌ಬಿಆರ್‌ನ ರಾಮಚಂದ್ರ, ಬೀದರ್‌ ವಿದ್ಯಾರಣ್ಯ ಶಾಲೆಯ ಕೇದಾರ್‌, ಕಲಬುರಗಿ ಎಸ್‌ಬಿಆರ್‌ನ ವೈಭವ್‌ ಸೇರಿದ್ದಾರೆ.

ನಿಜಕ್ಕೂ ಇದು ಉತ್ತಮ ಅನುಭವ. ರಸಪ್ರಶ್ನೆಯಿಂದ ಐಕ್ಯೂ ಮಟ್ಟ ಹೆಚ್ಚಾಗಿದೆ. ಪ್ರಜಾವಾಣಿ ಉತ್ತಮ ಕೆಲಸ ಮಾಡಿದೆ.

–ಆರ್ಯನ್‌, ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿ

ಪ್ರಜಾವಾಣಿ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ. ಜ್ಞಾನಾರ್ಜನೆಗೆ ಸಹಕಾರಿಯಾಗಿದೆ.

–ಅಮೂಲ್ಯ, ಫ್ಯೂಚರ್‌ ಕಿಡ್ಸ್‌ ಶಾಲೆ ವಿದ್ಯಾರ್ಥಿನಿ

ಸಾಮಾನ್ಯ ಜ್ಞಾನ ಎಷ್ಟು ಮಹತ್ವದ್ದು ಎಂಬುದು ಈ ರಸಪ್ರಶ್ನೆಯಿಂದ ಗೊತ್ತಾಗಿದೆ. ನಿತ್ಯ ಪತ್ರಿಕೆ ಓದಿದರೆ ಅನುಕೂಲ.

–ವಿದ್ಯಾಶ್ರೀ, ಚಾಂಗಲೇರಾ ಸರ್ಕಾರಿ ಶಾಲೆ ವಿದ್ಯಾರ್ಥಿನಿ

ಪ್ರಜಾವಾಣಿಯಂತೆ ಎಲ್ಲಾ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಾಗುತ್ತದೆ.

–ಭಾಗೀರಥಿ ರೆಡ್ಡಿ, ಶರಣಬಸವೇಶ್ವರ ಪಬ್ಲಿಕ್‌ ಶಾಲೆ ವಿದ್ಯಾರ್ಥಿನಿ

ಭಾಳ್‌ ಛಲೋ ಅನಿಸ್ತು. ಸಾಮಾನ್ಯ ಜ್ಞಾನ ಎಷ್ಟು ಮಹತ್ವದ್ದು ಎನ್ನುವುದು ತಿಳಿಯಿತು. ಪತ್ರಿಕೆ ಓದುವುದು ಎಷ್ಟು ಮಹತ್ವ ಎಂದು ಗೊತ್ತಾಯಿತು.

–ಮಲ್ಲೇಶ್‌, ಶಿರಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.