ADVERTISEMENT

ಹರಿಪ್ರಸಾದ ಅವರನ್ನು ಕಾಂಗ್ರೆಸ್‌ ಪಕ್ಷ ತುಳಿಯುತ್ತಿದೆ: ಪ್ರಣಾವನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 12:59 IST
Last Updated 27 ಡಿಸೆಂಬರ್ 2023, 12:59 IST
   

ಬೀದರ್‌: ‘ಕಾಂಗ್ರೆಸ್‌ ಪಕ್ಷವು ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರನ್ನು ತುಳಿಯುವ ಕೆಲಸ ಮಾಡುತ್ತಿದೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದಿದ್ದರೆ ಅವರು ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದು ಸೂಕ್ತ’ ಎಂದು ಚಿತ್ತಾಪುರ ಕರದಾಳ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ್‌ ಅವರು ಎಂದೂ ಕಾಂಗ್ರೆಸ್‌ ಬಿಟ್ಟು ಹೋದವರಲ್ಲ. ಅವರನ್ನು ಕಡೆಗಣಿಸಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್‌ನಿಂದ ಬಂದು ಕಾಂಗ್ರೆಸ್‌ನಲ್ಲಿ ಎಲ್ಲ ಅನುಭವಿಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಈಡಿಗ ಸಂಘದ ಸಮಾವೇಶವು ಸ್ವಾರ್ಥದಿಂದ ಕೂಡಿತ್ತು. ಸ್ವಾರ್ಥ ಉದ್ಯಮಿಗಳು, ರಾಜಕಾರಣಿಗಳು ಮಾಡಿದ ಸಮಾವೇಶ ಅದು. ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಒಂದೇ ಒಂದು ಘೋಷಣೆ ಮಾಡಿಲ್ಲ. ಕೋಟಿ ಚೆನ್ನಯ್ಯಾ ದೇಗುಲಕ್ಕೆ ₹5 ಕೋಟಿ ಬಿಡುಗಡೆಗೊಳಿಸಿದ್ದೇವೆ ಎಂದು ಸಿ.ಎಂ. ಹೇಳಿದ್ದಾರೆ. ಆದರೆ, ನಯಾ ಪೈಸೆ ಬಿಡುಗಡೆಗೊಳಿಸಿಲ್ಲ ಎಂದು ಆರೋಪಿಸಿದರು.

ADVERTISEMENT

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈಡಿಗ ಸಮಾಜದ ಇಬ್ಬರು ಸಚಿವರಾಗಿದ್ದರು. ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಮಾಡಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರ ಸಮಾಜದ ಒಬ್ಬರಿಗೆ ಮಂತ್ರಿ ಸ್ಥಾನ ನೀಡಿದೆ. ಹಿಂದಿನ ಸರ್ಕಾರದಲ್ಲಿ ಸಿಕ್ಕಿರುವಂತೆ ಪ್ರಾತಿನಿಧ್ಯ ಸಿಗಬೇಕು. ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಈಡಿಗ ಸಮಾಜದ ಮುಖಂಡರನ್ನು ಕಡೆಗಣಿಸಲಾಗಿದೆ. ಮಾಲೀಕಯ್ಯ ಗುತ್ತೇದಾರ್‌ ಅವರಿಗೆ ಸ್ಥಾನ ನೀಡಬೇಕಿತ್ತು. ಸಿದ್ದರಾಮಯ್ಯನವರು ಅಹಿಂದ ಸಿ.ಎಂ. ಎನ್ನುವುದು ಎಲ್ಲರಿಗೂ ಗೊತ್ತು.ಆದರೆ, ಆ ವರ್ಗಕ್ಕೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಒತ್ತಾಯಿಸಿದರು.

ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಕಲಬುರಗಿಯಲ್ಲಿ ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಇದನ್ನು ಮರೆಯಬಾರದು. ಸಮಾಜವನ್ನು ಕಡೆಗಣಿಸಿದರೆ ಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸೇರಿದಂತೆ ಒಟ್ಟು 16 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯದಾದ್ಯಂತ ಏಕಕಾಲಕ್ಕೆ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಬೇಡಿಕೆ ಈಡೇರಿಸದಿದ್ದಲ್ಲಿ ಬರುವ ಏಪ್ರಿಲ್‌ನಲ್ಲಿ ಬಸವಕಲ್ಯಾಣದ ಬಾಲಕುಂದಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯಕ್ಕೆ ಈಡಿಗ ಸಮಾಜದ ಕೊಡುಗೆ ದೊಡ್ಡದಿದೆ. ಸಮಾಜ ಕಾಂಗ್ರೆಸ್‌ ಸರ್ಕಾರದೊಂದಿಗೆ ಗುರುತಿಸಿಕೊಂಡಿದೆ. ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು. ಜಾತಿ ಗಣತಿಗಾಗಿ ರಾಜ್ಯ ಸರ್ಕಾರ ₹175 ಕೋಟಿ ಖರ್ಚು ಮಾಡಿದೆ. ಆ ವರದಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್‌, ಕಾರ್ಯದರ್ಶಿ ಸಂಗಯ್ಯಾ ಸುಲ್ತಾನಪುರ, ಪ್ರಮುಖರಾದ ಸುಭಾಷ ಚೌಧರಿ, ಶಂಕರರಾವ ನೇಳಗಿ, ಚಂದ್ರಶೇಖರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.