ADVERTISEMENT

ಪೊಲೀಸರು ಬಂಧಿಸುವುದು ಬಿಟ್ಟು ಬೆಂಬಲಕ್ಕೆ ನಿಂತರೇ?: ಅರವಿಂದಕುಮಾರ ಅರಳಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 15:20 IST
Last Updated 1 ಆಗಸ್ಟ್ 2025, 15:20 IST
   

ಬೀದರ್‌: ‘ಔರಾದ್‌ ಶಾಸಕ ಪ್ರಭು ಚವಾಣ್‌ ಅವರ ಮಗ ಪ್ರತೀಕ್‌ ಚವಾಣ್‌ ಮೇಲಿನ ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸುವುದು ಬಿಟ್ಟು ಆತನ ಬೆಂಬಲಕ್ಕೆ ನಿಂತರೆ ಸಾಮಾನ್ಯ ಜನ ಭಯಭೀತರಾಗುವುದಿಲ್ಲವೇ’ ಎಂದು ಕಾಂಗ್ರೆಸ್‌ ಮುಖಂಡರೂ ಆದ ಮಾಜಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಪ್ರಶ್ನಿಸಿದ್ದಾರೆ.

ಪ್ರತೀಕ್‌ ಚವಾಣ್‌ ವಿರುದ್ಧ ಸಂತ್ರಸ್ತ ಯುವತಿ ದೂರು ಕೊಟ್ಟು 15 ದಿನಗಳಾಗಿವೆ. ಬಿಎನ್‌ಎಸ್‌ 376 ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿಲ್ಲ. ಜಾಮೀನು ಆಗುವವರೆಗೆ ಬಿಟ್ಟು ಪ್ರಕರಣವೇ ದಾಖಲಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ಪ್ರತೀಕ್‌ ಚವಾಣ್‌ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಕೂಡಲೇ ಆತನನ್ನು ಹುಡುಕಿ ಬಂಧಿಸಿ, ಬಡ ಯುವತಿಗೆ ನ್ಯಾಯ ಒದಗಿಸುವುದು ಬಿಟ್ಟು ಆರೋಪಿಯ ಬೆಂಬಲಕ್ಕೆ ನಿಂತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಗೃಹಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ ಪತ್ರ ಬರೆದಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಸಾಮಾನ್ಯರಿಗೆ ಒಂದು, ಬಿಜೆಪಿಯವರಿಗೆ ಒಂದು ವಿಶೇಷ ಕಾನೂನು ಮಾಡಲಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಬಿಜೆಪಿಯ ನಾಯಕರು ಎಂತಹುದೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸ್‌ ಇಲಾಖೆಯಿಂದ ಹಿಂಪಡೆಯಲಾಗಿದೆಯೇ? ಬಿಜೆಪಿಯವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆಯೇ? ಹೀಗಾದರೆ ಜನಸಾಮಾನ್ಯರಿಗೆ ಕಾನೂನಿನ ಮೇಲೆ ಭರವಸೆ ಇರುತ್ತದೆಯೇ ಎಂದು ಕೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.