ADVERTISEMENT

ಅಕ್ರಮ ಜಾನುವಾರು ಸಾಗಣೆ ತಡೆಯಿರಿ: ಪ್ರಭು ಚವಾಣ್ ಪೊಲೀಸರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 13:57 IST
Last Updated 9 ಜುಲೈ 2021, 13:57 IST

ಬೀದರ್‌: ಜಿಲ್ಲೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (ಗೋಹತ್ಯೆ ನಿಷೇಧ ಕಾಯ್ದೆ) ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯ ಗೋವುಗಳನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಗೋವುಗಳು ಕಸಾಯಿಖಾನೆಗೆ ಹೋಗುವುದು ನಿಲ್ಲಬೇಕು. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲೆಯ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‌ಗಳು ಸರಿಯಾಗಿ ಕೆಲಸ ಮಾಡಬೇಕು. ಅಲ್ಲಿ ದಿನದ 24 ಗಂಟೆ ನಿಗಾ ಇಡಲು ಸಿಬ್ಬಂದಿ ನಿಯೋಜಿಸಬೇಕು. ಕಾನೂನು ಬಾಹಿರವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಮುಚ್ಚಿಸಲು ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.

ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಸಲಾಖೆಯ ಉಪ ನಿರ್ದೇಶಕರು ಹಾಗೂ ಎಲ್ಲ ಸಹಾಯಕ ನಿರ್ದೇಶಕರು ಕಾಯ್ದೆಯ ಅನುಷ್ಠಾನ ಕುರಿತಂತೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಎಲ್ಲಿಯಾದರೂ ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣಗಳು ನಡೆದಲ್ಲಿ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡುಬಂದಲ್ಲಿ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳನ್ನು ಅಥವಾ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು. ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದಿದ್ದರೆ ನೇರವಾಗಿ ನನಗೆ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಚಿಟಗುಪ್ಪ ಸಮೀಪ ಎರಡು ವಾಹನಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 11 ಜಾನುವಾರುಗಳ ರಕ್ಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.