ಸಂತೋಷ್ ಲಾಡ್
ಬೀದರ್: ‘ಸಚಿವ ಪ್ರಿಯಾಂಕ್ ಖರ್ಗೆ ಯಾವುದೇ ರೀತಿಯ ಧಮ್ಕಿಗಳಿಗೆ ಹೆದರುವ ಅಗತ್ಯವಿಲ್ಲ. ಈ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಗೌರಿ ಲಂಕೇಶ್, ಧಾಬೋಲ್ಕರ್ ಸೇರಿ ಅನೇಕರ ಕೊಲೆಗಳಾಗಿವೆ. ಈ ತರಹದ ಧಮ್ಕಿ ಹೊಸತಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
‘ಸರ್ಕಾರದ ವಿರುದ್ಧವಾಗಿ ಪತ್ರಕರ್ತರು ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣದ 52 ಜನ ಸಾಕ್ಷಿಗಳ ಪೈಕಿ 44 ಜನರ ಕೊಲೆಯಾಗಿದೆ. ಇದರ ಬಗ್ಗೆ ಸಿನಿಮಾ ಮಾಡಬಹುದು. ಇದರ ಬಗ್ಗೆ ಚರ್ಚೆ ಆಗುವುದಿಲ್ಲ. ಪ್ರಧಾನಿ, ಬಿಜೆಪಿಯ ಯಾವುದೇ ಮುಖಂಡರು ಇದರ ಬಗ್ಗೆ ಮಾತನಾಡುವುದಿಲ್ಲ. ಸಿಬಿಐ ತನಿಖೆ ಆಗುವುದಿಲ್ಲ. ಈ ಕೊಲೆಗಳ ಬಗ್ಗೆ ಚರ್ಚೆಗಳಾಗುವುದಿಲ್ಲ. ಬಿಜೆಪಿಯವರು ತಮ್ಮದು ದೊಡ್ಡ ಪಕ್ಷ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಇದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರೆ ಗೊತ್ತಾಗುತ್ತದೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ದೇಶದಲ್ಲಿ ಯಾವ ಸರ್ಕಾರವೂ ಶಾಶ್ವತವಲ್ಲ. ಈ ದೇಶ ಬಿಜೆಪಿ, ಕಾಂಗ್ರೆಸ್ಸಿನವರದ್ದಲ್ಲ. ಎಲ್ಲರಿಗೂ ಸಂಬಂಧಿಸಿದ್ದು. ಬಿಜೆಪಿಯವರು ಅಧಿಕಾರಕ್ಕಾಗಿ ಎಲ್ಲಾ ವ್ಯವಸ್ಥೆ ಗಾಳಿಗೆ ತೂರಿದ್ದಾರೆ’ ಎಂದು ಆರೋಪಿಸಿದರು.
‘ನಮ್ಮ ಗ್ಯಾರಂಟಿ ಯೋಜನೆಗಳನ್ನು ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲೆಡೆ ಓಡಾಡುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಗ್ಯಾರಂಟಿಗಳನ್ನೇ ಬಳಸುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮಹಿಳೆಯರಿಗೆ ಒಂದು ಮತಕ್ಕೆ ಬಿಜೆಪಿಯವರು ₹10 ಸಾವಿರ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಸಲ ಸಚಿವರಿಗೆ ಡಿನ್ನರ್ ಮೀಟಿಂಗ್ ಕರೆಯುತ್ತಾರೆ. ನಾವು ಹೋಗುತ್ತೇವೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ ಸಭೆಯಲ್ಲಿ ಮಾತನಾಡಿಲ್ಲ. ಒಂದು ವೇಳೆ ಪುನರ್ ರಚಿಸಬೇಕಾದರೆ ಅದನ್ನು ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.