ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿ ಚನ್ನಬಸವ ಶಿವಯೋಗಿಗಳ 73ನೇ ಜಾತ್ರೆಯ ಮೂರನೇ ದಿನ ಸೋಮವಾರ ಜಾನುವಾರು ಪ್ರದರ್ಶನ ನಡೆಯಿತು. ಎತ್ತುಗಳ ನಾನಾ ತಳಿಯ ಪರಿಚಯ ಆಗುವುದರೊಂದಿಗೆ ಅವುಗಳ ಮಾರಾಟ ಮತ್ತು ಖರೀದಿಯೂ ಜೋರಾಗಿತ್ತು.
ಮಠದ ಹಿಂದಿರುವ ಶಿರಗಾಪುರ ರಸ್ತೆಯ ಅಕ್ಕಪಕ್ಕದ ಜಮೀನಿನಲ್ಲಿ ಎತ್ತುಗಳ ಆಕರ್ಷಕ ಜೋಡಿಗಳನ್ನು ಕಟ್ಟಲಾಗಿತ್ತು. ಅಲ್ಲಲ್ಲಿ ಆಕಳು, ಎಮ್ಮೆ, ಕರುಗಳು ಸಹ ಇದ್ದವು. ದೇವಣಿ, ಕಿಲ್ಲಾರ ತಳಿಯ ಎತ್ತುಗಳು ನೋಡುಗರ ಗಮನ ಸೆಳೆಯುವಂತೆ ಕಟ್ಟುಮಸ್ತಾಗಿದ್ದವು. ಎರಡು ದಿನಗಳ ಮೊದಲೇ ಜಾನುವಾರುಗಳನ್ನು ಇಲ್ಲಿಗೆ ತರಲಾಗಿತ್ತು. ಖರೀದಿಗಾಗಿ ಬಂದಿದ್ದ ರೈತರು ಅಲ್ಲಿ ಇಲ್ಲಿ ಅಡ್ಡಾಡಿ ಎತ್ತುಗಳ ಮೈಮುಟ್ಟಿ ನೋಡುತ್ತಿದ್ದರು. ಅವುಗಳ ಬಾಯಿ ಅಗಲಗೊಳಿಸಿ ಹಲ್ಲುಗಳನ್ನು ಎಣಿಸುತ್ತಿರುವುದು ಕಂಡು ಬಂತು.
’ಈ ಜಾತ್ರೆಯಲ್ಲಿ ದೂರದೂರದ ಉತ್ತಮ ಜಾನುವಾರುಗಳು ಬರುತ್ತವೆ. ಆದ್ದರಿಂದ ಎತ್ತು ಖರೀದಿಗಾಗಿ ಬಂದಿದ್ದೇನೆ. ಆದರೆ ಬೆಲೆ ಅಧಿಕವಿರುವ ಕಾರಣ ಹತಾಶನಾಗಿ ಕುಳಿತಿದ್ದೇನೆ' ಎಂದು ಆಳಂದ ರೈತ ಶಿವನಾಗಪ್ಪ ಹೇಳಿದರು.
`ಹಾಲಿಗಾಗಿ ಆಕಳು ಖರೀದಿಸುವುದಕ್ಕೆ ಬಂದಿದ್ದೆ. ಆದರೆ, ಉತ್ತಮವಾದ ಕರು ಸಿಕ್ಕಿದ್ದರಿಂದ ₹30 ಸಾವಿರಕ್ಕೆ ಅದನ್ನು ಖರೀದಿಸಿದ್ದೇನೆ' ಎಂದು ಚಿತ್ತಕೋಟಾದ ಬಸವರಾಜಪ್ಪ ತಿಳಿಸಿದರು.
`ಒಂದೊಂದು ಎತ್ತಿನ ಬೆಲೆ ₹1.20 ಲಕ್ಷದಷ್ಟಿತ್ತು. ಜೋಡೆತ್ತುಗಳು ₹2 ಲಕ್ಷದಿಂದ ₹2.50 ಲಕ್ಷಕ್ಕೆ ಖರೀದಿಸಲಾಗಿದೆ. ಲಾಡವಂತಿಯ ಸಂಜೀವಕುಮಾರ ಅವರ ಪ್ರತಿದಿನ 9 ಲೀಟರ್ ಹಾಲು ಕೊಡುವ ಎಮ್ಮೆ ₹1.60 ಲಕ್ಷಕ್ಕೆ ಮಾರಾಟವಾಯಿತು. ಪ್ರದರ್ಶನವನ್ನು ಪಶುಪಾಲನಾ ಇಲಾಖೆಯ ಪ್ರಸಕ್ತ ಸಾಲಿನ ವಿಸ್ತೀರ್ಣ ಚಟುವಟಿಕೆ ಬಲಪಡಿಸುವ ಯೋಜನೆ ಅಡಿಯಲ್ಲಿ ಏರ್ಪಡಿಸಲಾಗಿದೆ. ಮೂರು ಉತ್ತಮ ಜೋಡಿಗಳಿಗೆ ಬಹುಮಾನ ವಿತರಿಸಲಾಗಿದೆ. ಹಿರೇಮಠ ಸಂಸ್ಥಾನ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದಲೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು' ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ ತಿಳಿಸಿದರು.
ಬಹುಮಾನ: ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಉತ್ತಮ ಎತ್ತುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪಶುಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ನರಸಪ್ಪ, ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ, ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಚನ್ನಪ್ಪಗೌಡ ಬಿರಾದಾರ, ಎಪಿಎಂಸಿ ಅಧಿಕಾರಿ ಶ್ರೀನಿವಾಸ ಬಿರಾದಾರ, ಡಾ.ಪೃಥ್ವಿರಾಜ, ಡಾ.ಕಿರಣ, ಡಾ.ಭೀಮರೆಡ್ಡಿ ಉಪಸ್ಥಿತರಿದ್ದರು.
ಶರಣಪ್ಪ ಗಣಪತಿ ಪೂಜಾರಿ ಮುಡಬಿಯ ದೇವಣಿ ಎತ್ತುಗಳಿಗೆ ಪ್ರಥಮ ಬಹುಮಾನವಾಗಿ ₹10 ಸಾವಿರ ನೀಡಲಾಯಿತು. ಮಲ್ಲಪ್ಪ ಜಿಲೇಬಿ ಮುಡಬಿ ಅವರ ದೇವಣಿ ತಳಿ ಎತ್ತುಗಳಿಗೆ ದ್ವಿತೀಯ ಬಹುಮಾನವಾಗಿ ₹7.50 ಸಾವಿರ ಬಹುಮಾನ ವಿತರಿಸಲಾಯಿತು. ಕಮಲಾಕರ ಬಂಡೆ ಜಾಫರವಾಡಿ ಇವರ ದೇವಣಿ ಎತ್ತುಗಳಿಗೆ ತೃತೀಯ ಬಹುಮಾನವಾಗಿ ₹5 ಸಾವಿರ ನೀಡಲಾಯಿತು. 20 ಜೋಡಿಗಳಿಗೆ ಸಮಾಧಾನಕರ ಬಹುಮಾನ ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.