
ಹುಮನಾಬಾದ್: ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕೈಕೈ ಮಿಲಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕೆಲಕಾಲ ಉದ್ವಿಗ್ನಗೊಂಡಿದ್ದ ಪಟ್ಟಣ ಪೊಲೀಸರ ಸಕಾಲಿಕ ಕ್ರಮದಿಂದ ಮಂಗಳವಾರ ಸಹಜ ಸ್ಥಿತಿಗೆ ಮರಳಿದೆ.
ಘಟನೆ ಸಂಬಂಧ ಹುಮನಾಬಾದ್ ಪಟ್ಟಣದ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಹೊರಡಿಸಿದ್ದ 163/1 ರನ್ವಯ ನಿಷೇಧಾಜ್ಞೆ ಜಾರಿ ಮಾಡಿರುವ ಆದೇಶವನ್ನು ತಹಶೀಲ್ದಾರ್ ಅಂಜುಂ ತಬಸುಮ್ ಅವರು ಮಂಗಳವಾರ ಸಂಜೆ 5.30ಕ್ಕೆ ತೆರವು ಮಾಡಿ ಆದೇಶ ಹೊರಡಿಸಿದರು.
ಹುಮನಾಬಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 163/1ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು. ಕೆಎಸ್‌ಆರ್‌ಪಿಯ 2 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) 3 ತುಕಡಿಗಳನ್ನು ನಿಯೋಜಿಸಲಾಗಿತ್ತು.
ಸ್ಥಳೀಯ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ 60ಕ್ಕೂ ಹೆಚ್ಚು ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಲ್ಲದೆ ಶಾಂತಿ–ಸುವ್ಯವಸ್ಥೆ ಕಾಪಾಡಲಾಗಿದೆ.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಡಾ.ಚಂದ್ರಶೇಖರ ಪಾಟೀಲ ವೈಯಕ್ತಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕೈಕೈ ಮಿಲಾಯಿಸಿಕೊಂಡಿದ್ದರಿಂದ ಶಾಸಕರುಗಳ ಮನೆ ಎದುರು ಭಾರಿ ಪ್ರಮಾಣದಲ್ಲಿ ಕಾರ್ಯಕರ್ತರ ದಂಡು ಸೇರಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಸ್ವತಃ ಇಬ್ಬರು ಶಾಸಕರ ಮನೆಗಳ ಹತ್ತಿರ ಜಮಾಯಿಸಿದ ಜನರನ್ನು ಚರಿದುರಿಸಿ ಜನ ಸೇರಿವುದಕ್ಕೆ ಬಿಡಲ್ಲಿಲ್ಲ.
ಎಸ್‌ಪಿ ಪ್ರದೀಪ್ ಗುಂಟೆ ಅವರು ಹುಮನಾಬಾದ್ ಬಸ್ ನಿಲ್ದಾಣದ ಹತ್ತಿರವಿದ ಭೀಮರಾವ ಪಾಟೀಲ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹತ್ತಿರವಿರುವ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ನಿವಾಸದ ಹತ್ತಿರ ಪೊಲೀಸರನ್ನು ನಿಯೋಜಿಸಿ ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು.
ಭಯಭೀತರಾಗಿದ್ದ ಜನ
ಶಾಸಕರ ನಡೆದ ಗಲಾಟೆ ಸಂಬಂಧ ಹುಮನಾಬಾದ್ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಪೊಲೀಸರು ಭಾರಿ ಬಂದೋಬಸ್ತ್ ಕೈಗೊಂಡಿದ್ದರಿಂದ ಇಷ್ಟು ಬಿಗಿ ಏಕೆ ಮಾಡುತ್ತಿದ್ದಾರೆ ಎಂದು ಕೆಲ ಹೊತ್ತು ಜನ ಭಯಭೀತರಾಗಿದ್ದರು. ಎಲ್ಲಡೆ ಪೊಲೀಸ್ ವಾಹನಗಳ ಸೈರನ್ ಮೊಳಗತೊಡಗಿತ್ತು. ಆಕಟ್ಟಿನ ಸ್ಥಳಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಶಾಸಕರ ಮಧ್ಯ ನಡೆದ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಬಂದೋಬಸ್ತ್‌ನಲ್ಲಿ ತೊಡಗಿದ್ದ ಪೊಲೀಸರು ಮದ್ಯಾಹ್ನದ ನಂತರ ಆಟೊ ಹಾಗೂ ಪೊಲೀಸ್ ವಾಹನಗಳಲ್ಲಿ ಧ್ವನಿವರ್ಧಕ ಮೂಲಕ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾಗ ಜನರೂ ಸಹಕಾರ ನೀಡಿದರು.
ಪೊಲೀಸರ ಪಥಸಂಚಲನ
ಮಂಗಳವಾರ ಸಂಜೆ ಡಿವೈಎಸ್ಪಿಗಳಾದ ಮಡೋಳಪ್ಪ ಶಿವಾನಂದ ಪಾವಡಶಟ್ಟಿ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದ ಕೋಳಿವಾಡ ಜೇರಪೇಟ್ ವೀರಭದ್ರೇಶ್ವರ ದೇವಸ್ಥಾನ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಜಾತ್ರೆಯ ಪೂರ್ವಸಿದ್ಧತಾ ಸಭೆ ಮುಂದೂಡಿಕೆ
ಶಾಸಕರ ಗಲಾಟೆ ಸಂಬಂಧ ವೀರಭದ್ರೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಪೂರ್ವಸಿದ್ದತಾ ಸಭೆಯನ್ನು ಮುಂದೂಡಲಾಗಿದೆ ಎಂದು ಬಸವಕಲ್ಯಾಣ ಸಹಾಯಕ ಆಯುಕ್ತರು ಮತ್ತು ವೀರಭದ್ರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುದರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.