ADVERTISEMENT

ಶವ ಇಟ್ಟು ಕುಟುಂಬ ಸದಸ್ಯರ ಪ್ರತಿಭಟನೆ

ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ; ಸಚಿವ ಚವಾಣ್ ನೆರವಿನ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 10:18 IST
Last Updated 15 ಏಪ್ರಿಲ್ 2022, 10:18 IST
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಗುರುವಾರ ಕೊಲೆಯಾದ ಯುವಕನ ಸಹೋದರ ಸಂಭಂದಿಕರು ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಗುರುವಾರ ಕೊಲೆಯಾದ ಯುವಕನ ಸಹೋದರ ಸಂಭಂದಿಕರು ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು   

ಕಮಲನಗರ: ಕೊಲೆಗೀಡಾದ ಅಂತೇಶ್ವರ ವೈಜನಾಥ ಬನವಾಸೆ (38) ಎಂಬುವರ ಶವವನ್ನು ಗುರುವಾರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಕೊಲೆ ಆರೋಪಿ ಪ್ರವೀಣ್ ಮನೆ ಎದುರು ಇಟ್ಟು ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.

‘ಅಂತೇಶ್ವರ ಡಿಗ್ಗಿ ಗ್ರಾಮದಲ್ಲಿ ಸ್ವಂತ ಕೈತೋಟದಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದ ಮತ್ತು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಆತನನ್ನು ಏ‌ಪ್ರಿಲ್ 12ರಂದು ಬೆಳಿಗ್ಗೆ 9:30ಕ್ಕೆ ಎರಡು ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಔರಾದ್ ತಾಲ್ಲೂಕಿನ ಸಂತಪುರ ಹೊರವಲಯದ ಡಾಬಾ ಬಳಿ ಕರೆದೊಯ್ದು ಕೊಲೆ ಮಾಡಿದ್ದಾರೆ. ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಬೇಕು’ ಎಂದು ಕುಟುಂಬ ಸದಸ್ಯರು ಒತ್ತಾಯಿಸಿದರು.

‘ಕೊಲೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅಂತೇಶ್ವರನ ಹಿರಿಯ ಸಹೋದರ ಸಂತೋಷ ಬನವಾಸೆ ಒತ್ತಾಯಿಸಿದರು.

ADVERTISEMENT

‘ಆರೋಪಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಅಮಾಯಕರು ಜೀವ ಭಯದಲ್ಲಿ ಬದುಕುವಂತಾಗಿದೆ. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿದೆ ಎಂದು ನೋವು ತೋಡಿಕೊಂಡರು.

ಪ್ರತಿಭಟನಾ ಸ್ಥಳಕ್ಕೆ ಭಾಲ್ಕಿ ಡಿವೈಎಸ್ಪಿ ಜೇಮ್ಸ್, ಸಿಪಿಐ ಘಾಳೆಪ್ಪ, ಕ್ರೈಂ ಪಿಎಸ್‍ಐ ಬಸವರಾಜ ಪಾಟೀಲ, ಪಿಎಸ್‍ಐ ನಂದಿನಿ.ಎಸ್ ಹಾಗೂ ಕಾಯ್ದಿಟ್ಟ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ದೂರವಾಣಿ ಕರೆ ಮಾಡಿ ಮಾತನಾಡಿದ ಸಚಿವ ಪ್ರಭು ಚವಾಣ್, ‘ಕುಟುಂಬ ಸದಸ್ಯರಿಗೆ ಕಾನೂನು ಪ್ರಕಾರ ನ್ಯಾಯ ಒದಗಿಸಲಾಗುವುದು. ಅನ್ಯಾಯ ಆಗದಂತೆ ಎಚ್ಚರ ವಹಿಸಲಾಗುವುದು. ಯುವಕನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯ ನೀಡಿ, ಕುಟುಂಬ ನಿರ್ವಹಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಕೊಲೆ ಪ್ರಕರಣವು ಸಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಔರಾದ್ ಸರ್ಕಲ್ ಇನ್‌ಸ್ಪೆಕ್ಟರ್ ರವೀಂದ್ರನಾಥ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.