ಖಟಕಚಿಂಚೋಳಿ: ಭಾಲ್ಕಿಯಿಂದ ಖಟಕಚಿಂಚೋಳಿ ಹಾಗೂ ಸಿಕಂದರಾ ಬಾದ್ ವಾಡಿ ಗ್ರಾಮಕ್ಕೆ ಸಕಾಲಕ್ಕೆ ಬಸ್ ಬಾರದಿರುವುದನ್ನು ಖಂಡಿಸಿ ಶನಿವಾರ ಎಬಿವಿಪಿ ಕಾರ್ಯಕರ್ತರು ಹಾಗೂ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆಯಿಂದ ಸುಮಾರು ಎರಡು ತಾಸುಗಳವರೆಗೂ ನಡೆದ ಪ್ರತಿಭಟನೆಯಿಂದಾಗಿ ಭಾಲ್ಕಿ-ಹುಮನಾಬಾದಗೆ ಸಂಚರಿಸುವ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.ನಂತರ ಭಾಲ್ಕಿಯ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಿ ನಾಳೆಯಿಂದ ಸಕಾಲಕ್ಕೆ ಬಸ್ ಓಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕೊರೊನಾ ಹರಡುವಿಕೆ ಕಡಿಮೆಯಾಗಿರುವುದರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಮೂರು ತಿಂಗಳೇ ಕಳೆದಿವೆ. ಆದರೂ ಕೂಡ ಸಿಕಿಂದ್ರಾಬಾದ್ ವಾಡಿಗೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿ ದಿನ ಬೆಳಿಗ್ಗೆ 3-4 ಕಿ.ಮೀಟರ್ ನಡೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಭಾಲ್ಕಿಯಿಂದ ಬಸ್‌ಗಳು ಖಟಕಚಿಂಚೋಳಿ ಒಳಗೆ ಹೋಗದೆ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ಬಸ್ ಗೆ ಹೋಗುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂಗಡ ದುಡ್ಡು ಕೊಟ್ಟು, ಬಸ್‌ಪಾಸ್ ಮಾಡಿಸಿದ್ದೇವೆ ಆದರೂ ಬಸ್ ಸೌಕರ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಸಿದರು.
ಇನ್ನು ಕೆಲವು ಬಸ್ ಗಳ ಚಾಲಕರು ವಿದ್ಯಾರ್ಥಿಗಳನ್ನು ನೋಡಿದರೆ ಸಾಕು ದೂರದಲ್ಲಿ ಬಸ್ ನಿಲ್ಲಿಸುತ್ತಾರೆ.ಇಲ್ಲವೇ ನಿಲ್ಲಿಸದೇ ಹಾಗೆ ಹೋಗುತ್ತಾರೆ. ಅವರಿಗೆ ಪ್ರಶ್ನಿಸಿದರೆ ಬೇದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿ ರಮೇಶ ಅಸಮಾಧಾನವ್ಯಕ್ತಪಡಿಸುತ್ತಾರೆ.
ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರೇವಣಸಿದ್ಧ ಜಾಡರ್ ಮಾತನಾಡಿ,' ಭಾಲ್ಕಿ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಆದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ.ಆದ್ದರಿಂದ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.