ADVERTISEMENT

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ 27ಕ್ಕೆ ಬಂದ್

ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 3:48 IST
Last Updated 18 ಸೆಪ್ಟೆಂಬರ್ 2021, 3:48 IST
ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್   

ಬೀದರ್‌: ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು ಎಂದು ಸೆ. 27ರಂದು ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬೆಂಬಲ ನೀಡಿದೆ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ
ಹೇಳಿದರು.

ಪೆಟ್ರೋಲ್‌, ಡೀಸೆಲ್‌, ಅಡಿಗೆ ಅನಿಲ, ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಅನೇಕ ಆಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಜನ ಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ. ರೈತರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕೇವಲ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ನಿರಂತರವಾಗಿ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕೇಂದ್ರ ಸರ್ಕಾರ ಮೂರು ವರ್ಷಗಳಿಂದ ಕಬ್ಬಿನ ಎಫ್‌ಆರ್‌ಪಿ ನಿಗದಿ ಮಾಡಿಲ್ಲ. ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಟನ್ ಕಬ್ಬು ಬೆಳೆಯಲು ₹3,200 ಖರ್ಚಾಗುತ್ತಿದೆ. ಆದ್ದರಿಂದ ಉತ್ಪಾದನಾ ವೆಚ್ಚಕ್ಕೆ ಲಾಭ ಸೇರಿಸಿ ದರ ನಿಗದಿಪಡಿಸಬೇಕು. ನಿರ್ಲಕ್ಷ ತೋರಿದರೆ ರಾಜ್ಯದ 20 ಲಕ್ಷ ಕಬ್ಬು ಬೆಳೆಗಾರರು ಅಕ್ಟೋಬರ್ 5 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದ ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರಿಗೆ ಪ್ರತಿಯೊಂದು ಹಂತದಲ್ಲಿ ಮೋಸ ಮಾಡಲಾಗತ್ತಿದೆ, ಎಥೆನಾಲ್ ಉತ್ಪಾದನೆಯಿಂದ ಬರುವ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು. ಉತ್ತರಪ್ರದೇಶದಲ್ಲಿ ಶೇಕಡ 9ರಷ್ಟು ಇಳುವರಿ ಬರುವ ಕಬ್ಬಿಗೆ 3,200 ನಿಗದಿ ಮಾಡಿದ್ದಾರೆ. ಕರ್ನಾಟಕದಲ್ಲಿ ಶೇಕಡ 10 ಇಳುವರಿ ಇದ್ದರೂ ₹ 2,900 ದರ ಕೊಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ, ಬೀದರ್ ಜಿಲ್ಲಾ ರೈತ ಮುಖಂಡ ನಿರ್ಮಲಕಾಂತ ಪಾಟೀಲ, ಸುಮಂತ ಗ್ರಾಮಾಲೆ, ಜಗದೀಶ್ ಪಾಟೀಲ, ಧರ್ಮರಾಜ್ ಸಾವು, ರಮೇಶ್ ಹೂಗಾರ, ಹತ್ತಳ್ಳಿ ದೇವರಾಜ್, ಬಸವರಾಜ ಪಾಟೀಲ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.