ADVERTISEMENT

ಪಿಯು ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಗೆ ಟಾಪರ್: ರಿತಾಜ್ ಮಹಮ್ಮದ್ ಅಕ್ಬರ್

ಸಾಧನೆಯ ಶಿಖರಕ್ಕೊಯ್ಯುವ ಪರಿಶ್ರಮ

ಚಂದ್ರಕಾಂತ ಮಸಾನಿ
Published 17 ಜುಲೈ 2020, 16:10 IST
Last Updated 17 ಜುಲೈ 2020, 16:10 IST
ರಿತಾಜ್ ಮಹಮ್ಮದ್ ಅಕ್ಬರ್
ರಿತಾಜ್ ಮಹಮ್ಮದ್ ಅಕ್ಬರ್   

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ರಿತಾಜ್ ಮಹಮ್ಮದ್ ಅಕ್ಬರ್ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ರಿತಾಜ್ 600 ಅಂಕಗಳ ಪೈಕಿ 589 ಅಂಕ (ಶೇ 98.16) ಗಳಿಸಿದ್ದಾರೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನದಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಗಣಿತ, ಹಿಂದಿಯಲ್ಲಿ ತಲಾ 98 ಹಾಗೂ ಇಂಗ್ಲಿಷ್ ವಿಷಯದಲ್ಲಿ 93 ಅಂಕ ಗಳಿಸಿದ್ದಾರೆ.

ಮಂಗಳೂರು ಮೂಲದ ರಿತಾಜ್ ಶಿಕ್ಷಣಕ್ಕೆಂದೇ ಬೀದರ್‌ಗೆ ಬಂದಿದ್ದಾರೆ. ಕುವೈತ್‌ನಲ್ಲಿ ಹೋಟೆಲ್ ಹೊಂದಿರುವ ಇವರ ತಂದೆಗೆ ನಾಲ್ವರು ಹೆಣ್ಣು ಮಕ್ಕಳು, ರಿತಾಜ್ ಕೊನೆಯವಳು. ಮೊದಲನೆ ಮಗಳು ದಂತ ವೈದ್ಯೆ, ಎರಡನೆ ಮಗಳು ವೈದ್ಯೆ (ಜನರಲ್ ಸರ್ಜರಿ)ಯಾಗಿದ್ದಾರೆ, ಮೂರನೇ ಮಗಳು ಎಂಬಿಬಿಎಸ್ ಓದುತ್ತಿದ್ದಾರೆ. ನಾಲ್ಕನೇ ಮಗಳು ರಿತಾಜ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದುಕೊಳ್ಳಲು ನೀಟ್‌ಗೆ ಸಿದ್ಧತೆ ನಡೆಸಿದ್ದಾರೆ.

ADVERTISEMENT

ತಮ್ಮ ಸಾಧನೆಯ ಬಗ್ಗೆ ಪ್ರಶ್ನಿಸಿದಾಗ ಅವರು ಹೇಳಿದ್ದಿಷ್ಟು...

ಇದು ಆಧುನಿಕ ಯುಗ. ಶಿಕ್ಷಣದ ಬಗೆಗೆ ಆಸಕ್ತಿ ಇದ್ದರೆ ಹೆಣ್ಣುಮಕ್ಕಳು ಬದುಕಿನಲ್ಲಿ ಮುಂದೆ ಬರಬಹುದು. ಕಲಿಕೆಯಲ್ಲಿ ಆಸಕ್ತಿ ತೋರಿಸಿದರೆ ಪಾಲಕರೂ ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲು ಹಿಂಜರಿಯುವುದಿಲ್ಲ. ಕಠಿಣ ಪರಿಶ್ರಮ ಸಹಜವಾಗಿಯೇ ನಮ್ಮನ್ನು ಸಾಧನೆಯ ಶಿಖರದತ್ತ ಕೊಂಡೊಯ್ಯುತ್ತದೆ.

ಪರೀಕ್ಷೆಗೆ ಮುಂಚೆಯೇ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಂಡಿದ್ದರಿಂದ ಸಾಧನೆ ಸುಲಭವಾಯಿತು. ನಿತ್ಯ ಸಂಜೆ 7 ಗಂಟೆಯ ವೇಳೆಗೆ ಊಟ ಮುಗಿಸಿಕೊಂಡು ಸ್ವಲ್ಪ ಹೊತ್ತು ಓದಿ ಮಲಗುತ್ತಿದ್ದೆ. ಆದರೆ, ಬೆಳಗಿನ ಜಾವ 4.30ಕ್ಕೆ ಎದ್ದು ಓದುತ್ತಿದ್ದೆ. ಯಾವುದೇ ಗೌಜು ಇಲ್ಲದ ಪ್ರಶಾಂತವಾದ ಸಮಯದಲ್ಲಿ ಓದಿದಾಗ ವಿಷಯ ಸ್ಮರಣೆಯಲ್ಲಿ ಉಳಿಯುತ್ತಿತ್ತು. ಬೆಳಿಗ್ಗೆ ಸ್ನಾನ ಹಾಗೂ ಉಪಾಹಾರದ ನಂತರ ಮತ್ತೆ ಅಧ್ಯಯನ ಶುರು ಮಾಡುತ್ತಿದ್ದೆ.

ಹಾಸ್ಟೆಲ್‌ನಲ್ಲಿ ಇದ್ದರೂ ಸಹಪಾಠಿಗಳೊಂದಿಗೆ ಅನಗತ್ಯ ಚರ್ಚೆಗೆ ಅವಕಾಶ ಕೊಡುತ್ತಿರಲಿಲ್ಲ. ಬೇಸರ ಅನಿಸಿದಾಗ ಗೆಳೆಯತಿಯರೊಂದಿಗೆ ವಿಷಯದ ಬಗ್ಗೆ ಗುಂಪು ಚರ್ಚೆ ನಡೆಸುತ್ತಿದ್ದೆ. ಇದರಿಂದ ಕಠಿಣ ಎನ್ನುವ ವಿಷಯ ಹೆಚ್ಚು ಸ್ಮರಣೆಯಲ್ಲಿ ಉಳಿದುಕೊಳ್ಳುತ್ತಿತ್ತು. ಕಡಿಮೆ ಅರ್ಥ ಮಾಡಿಕೊಂಡ ನನ್ನ ಗೆಳತಿಯರಿಗೆ ಇನ್ನಷ್ಟು ಅರಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಕೆಲವೊಮ್ಮೆ ನೇರವಾಗಿ ಉಪನ್ಯಾಸಕರ ಬಳಿಗೆ ಹೋಗಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದೆ.

ನಿತ್ಯ ಮಧ್ಯಾಹ್ನದ ಅವಧಿಯಲ್ಲಿ ಒಂದು ತಾಸು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆ. ಇದರಿಂದ ಸಂಜೆ ಇನ್ನಷ್ಟು ಆಸಕ್ತಿಯಿಂದ ಓದಲು ಸಾಧ್ಯವಾಗುತ್ತಿತ್ತು. ನಮ್ಮ ಮನೆಯಲ್ಲಿ ಶೈಕ್ಷಣಿಕ ವಾತಾವರಣ ಇದೆ. ವೈದ್ಯರಾಗಿರುವ ಮೂವರು ಸಹೋದರಿಯರೇ ನನಗೆ ಪ್ರೇರಣೆಯಾಗಿದ್ದಾರೆ. ಇದೀಗ ನಾನು ಸಹ ಮಕ್ಕಳ ವೈದ್ಯಳಾಗ ಬಯಸಿದ್ದೇನೆ.

ಪಾಲಕರು ತಮ್ಮ ಮಕ್ಕಳಿಗೆ ಎಲ್ಲ ರೀತಿಯಿಂದಲೂ ಆಧಾರವಾಗುತ್ತಾರೆ. ಸಾಧನೆಯ ಛಲ, ಸ್ಪಷ್ಟ ಗುರಿ ಹಾಗೂ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಅಂಕಗಳನ್ನು ಗಳಿಸುವುದು ಕಷ್ಟವೇನಲ್ಲ. ಒತ್ತಾಯದ ಓದು ಹೆಚ್ಚು ಉತ್ತಮ ಫಲ ನೀಡದು. ಶೈಕ್ಷಣಿಕ ಸಾಧನೆಯಲ್ಲಿ ನಮ್ಮ ವೈಯಕ್ತಿಕ ಪರಿಶ್ರಮವೇ ಮಹತ್ವ ಪಡೆದುಕೊಳ್ಳುತ್ತದೆ.

ನಿರೂಪಣೆ: ಚಂದ್ರಕಾಂತ ಮಸಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.