
ಪ್ರಾತಿನಿಧಿಕ ಚಿತ್ರ
ಬೀದರ್: ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯ ವಾಹನಗಳು ಸದ್ದು ಮಾಡುತ್ತಿವೆ. ಇಡೀ ದೇಶದಲ್ಲಿ ವಾಹನಗಳ ಮೇಲೆ ಅತಿ ಕಡಿಮೆ ತೆರಿಗೆ ವಿಧಿಸುತ್ತಿರುವ ಕಾರಣ ಹೆಚ್ಚಿನವರು ಅಲ್ಲಿನ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಮೂಲಗಳ ಪ್ರಕಾರ, ಪಾಂಡಿಚೇರಿಯಲ್ಲಿ ಎಲ್ಲ ರೀತಿಯ ವಾಹನಗಳಿಗೆ ಶೇ 4ರಿಂದ 6ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ರಾಜ್ಯದಲ್ಲಿರುವ ಕನಿಷ್ಠ ತೆರಿಗೆಕ್ಕಿಂತಲೂ ಇದು ಬಹಳ ಕಡಿಮೆ. ರಾಜ್ಯದಲ್ಲಿ 1ರಿಂದ 5 ಲಕ್ಷ ಬೆಲೆಬಾಳುವ ವಾಹನಗಳಿಗೆ ಶೇ 13ರಷ್ಟು ತೆರಿಗೆ ಇದೆ. ಇದೇ ಕಾರಣಕ್ಕಾಗಿ ಜಿಲ್ಲೆಯ ಜನ ದೂರವಿದ್ದರೂ ಪಾಂಡಿಚೇರಿಯಿಂದ ವಾಹನಗಳನ್ನು ಖರೀದಿಸಿ, ತರುತ್ತಿದ್ದಾರೆ. ಅದರಲ್ಲೂ ದುಬಾರಿ ಬೆಲೆಯ ಐಷಾರಾಮಿ ವಾಹನಗಳು ಹೆಚ್ಚಿರುವುದು ಗಮನಾರ್ಹ.
ಮೋಟಾರು ವಾಹನ ಕಾಯ್ದೆ ಪ್ರಕಾರ, ಅನ್ಯ ರಾಜ್ಯಗಳಲ್ಲಿ ವಾಹನಗಳನ್ನು ಖರೀದಿಸಿದರೆ 30 ದಿನಗಳ ಒಳಗೆ ಆ ರಾಜ್ಯಕ್ಕೆ ಅನುಗುಣವಾಗಿ ತೆರಿಗೆ ಕಟ್ಟಲೇಬೇಕು. ಆದರೆ, ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಪಾಂಡಿಚೇರಿಯ ವಾಹನಗಳನ್ನು ಖರೀದಿಸಿ, ಅದರಲ್ಲೇ ಜನ ಸಂಚರಿಸುತ್ತಿದ್ದಾರೆ. ಆದರೆ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡು ತೆರಿಗೆ ವಸೂಲಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಕೆಲ ದಿನಗಳ ಹಿಂದೆ ಎರಡ್ಮೂರು ದಿನ ಆರ್‌ಟಿಒದಿಂದ ಅಭಿಯಾನ ನಡೆಸಲಾಗಿತ್ತು. ಅದಾದ ಬಳಿಕ ಯಾವುದೇ ಪ್ರಗತಿಯಾಗಿಲ್ಲ ಎಂದು ತಿಳಿದು ಬಂದಿದೆ.
‘ಅನ್ಯ ರಾಜ್ಯಗಳಲ್ಲಿ ವಾಹನಗಳನ್ನು ಖರೀದಿಸಿ ಓಡಾಡುತ್ತಿರುವವರನ್ನು ಗುರುತಿಸಿ, ತೆರಿಗೆ ಭರಿಸಿಕೊಳ್ಳಲು ವಿಶೇಷ ಸ್ಕ್ವಾಡ್ ರಚಿಸಲಾಗಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದ್ದು, ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ, ಬೀದರ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇದರ ಪ್ರಗತಿ ಬಹಳ ನಿರಾಶಾದಾಯಕವಾಗಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆರ್‌ಟಿಒ ಹಿರಿಯ ಅಧಿಕಾರಿಯೊಬ್ಬರು.
‘ಸರ್ಕಾರಕ್ಕೆ ಯಾರೇ ತೆರಿಗೆ ವಂಚಿಸಿದರೂ ತಪ್ಪು. ಅಂಥವರ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ತಪ್ಪಿಗೆ ಅಮಾಯಕರ ವಾಹನಗಳನ್ನು ತಡೆದು ದಂಡ ವಿಧಿಸುತ್ತಾರೆ. ದೊಡ್ಡ ಕುಳಗಳನ್ನು ಹಾಗೆಯೇ ಬಿಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಬಿ. ತಿಳಿಸಿದ್ದಾರೆ.
ಈ ಸಂಬಂಧ ಬೀದರ್ ಆರ್‌ಟಿಒ ಜಿ.ಕೆ. ಬಿರಾದಾರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.