
ಹುಲಸೂರ: ಸಮೀಪದ ತುಗಾಂವ್ (ಹಾ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಯಾತ್ರಾ ಉತ್ಸವಕ್ಕೆ ಈ ವರ್ಷ ಪಾರದರ್ಶಕತೆ, ಶಿಸ್ತಿನ ಆಯಾಮ ಸಿಕ್ಕಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಯಾತ್ರಾ ಉತ್ಸವ ಈ ಸಲ ಜ.14ರಿಂದ 19 ರವರೆಗೆ ನಡೆಯಲಿದ್ದು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಯಾತ್ರೆಯ ವೇಳೆ ಹಣಕಾಸಿನ ಅಕ್ರಮಗಳು ನಡೆಯದಂತೆ ಈ ವರ್ಷ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಕ್ಯೂಆರ್ ಕೋಡ್ (ಸ್ಕ್ಯಾನರ್) ಮೂಲಕ ದೇಣಿಗೆ ಸಲ್ಲಿಸುವ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಭಕ್ತರ ದೇಣಿಗೆ ನೇರವಾಗಿ ದೇವಸ್ಥಾನ ಟ್ರಸ್ಟ್ ಖಾತೆಗೆ ಜಮೆಯಾಗಿದೆ. ಅನಧಿಕೃತ ವಸೂಲಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.
ಮೊಬೈಲ್ ಫೋನ್ ಹೊಂದಿರದವರು ಅಥವಾ ನೆಟ್‌ವರ್ಕ್ ಸಮಸ್ಯೆ ಎದುರಿಸುವ ಭಕ್ತರು ಯಾವುದೇ ವ್ಯಕ್ತಿಗಳಿಗೆ ದೇಣಿಗೆ ನೀಡದೆ ದೇವಸ್ಥಾನದ ಮುಂಭಾಗದಲ್ಲಿ ಸ್ಥಾಪಿಸಲಾದ ಅಧಿಕೃತ ದೇಣಿಗೆ ಪೆಟ್ಟಿಗೆಯಲ್ಲೇ ಹಣ ಹಾಕಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.
‘ಯಾತ್ರಾ ಉತ್ಸವದ ಪಾವಿತ್ರ್ಯ ಕಾಪಾಡುವುದು, ಭಕ್ತರ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಉದ್ದೇಶ. ದೇಣಿಗೆಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬಂದರೆ ದೇವಸ್ಥಾನದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಭಕ್ತರು ಟ್ರಸ್ಟ್ ನಿರ್ಧಾರಕ್ಕೆ ಸಹಕಾರ ನೀಡಬೇಕು’ ಎಂದು ಈ ಕುರಿತು ಟ್ರಸ್ಟ್ ಅಧ್ಯಕ್ಷ ರಾಜ್‌ಕುಮಾರ್ ಪಾಟೀಲ ಅವರು ಮನವಿ ಮಾಡಿದ್ದಾರೆ.
ಹೊಸ ವ್ಯವಸ್ಥೆಗೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಗಿದ್ದು ಯಾತ್ರೆಯ ಸಮಯದಲ್ಲಿ ನಡೆಯುತ್ತಿದ್ದ ಆರೋಪ–ಪ್ರತ್ಯಾರೋಪಗಳಿಗೆ ತೆರೆ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.