ADVERTISEMENT

ಮಳೆ ಅವಾಂತರ: ಬೀದರ್‌ ಜಿಲ್ಲೆಯಲ್ಲಿ 61 ಸಾವಿರ ಹೆಕ್ಟೇರ್‌ ಬೆಳೆ ಹಾನಿ

ಮಳೆ ನಿಂತು ಹೋದ ಮೇಲೆ...

ಚಂದ್ರಕಾಂತ ಮಸಾನಿ
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST
ಬೀದರ್‌ನಲ್ಲಿ ಶುಕ್ರವಾರ ನಾಲ್ಕು ದಿನಗಳ ನಂತರ ಕಾಣಿಸಿಕೊಂಡ ಶುಭ್ರ ಆಕಾಶ
ಬೀದರ್‌ನಲ್ಲಿ ಶುಕ್ರವಾರ ನಾಲ್ಕು ದಿನಗಳ ನಂತರ ಕಾಣಿಸಿಕೊಂಡ ಶುಭ್ರ ಆಕಾಶ   

ಬೀದರ್: ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಮಳೆ ಕಡಿಮೆಯಾಗಿದೆ. ಮೋಡಗಳ ಹಿಂದೆ ಅವಿತು ಕುಳಿತಿದ್ದ ಸೂರ್ಯ ನಾಲ್ಕು ದಿನಗಳ ನಂತರ ಜಿಲ್ಲೆಯ ಜನರಿಗೆ ಶುಕ್ರವಾರ ದರ್ಶನ ನೀಡಿದ್ದಾನೆ. ಮಳೆಯೂ ವಿರಾಮ ನೀಡಿದೆ. ದಿನವಿಡೀ ಪ್ರಖರ ಬಿಸಿಲು ಇದ್ದ ಕಾರಣ ಜನರಲ್ಲಿ ನಿರಾಳ ಭಾವ ಕಂಡು ಬಂದಿತು.

ಹೊಲಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿರುವುದು ಹಾಗೂ ಬೆಳೆ ನೆಲಕ್ಕುರುಳಿದ್ದನ್ನು ಕಂಡು ರೈತರು ಆತಂಕಕ್ಕೆ ಒಳಗಾದರು. ಬೆಳೆ ಕೈಗೆ ಬಂದರೂ ಬಾಯಿ ಬರಲಿಲ್ಲ ಎಂದು ಮರುಕಪಟ್ಟರು. ಇದೇ ಅವಧಿಯಲ್ಲಿ ಹೊಲಗಳಲ್ಲಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬಂದಿದೆ.

ಜಿಲ್ಲೆಯಲ್ಲಿ ನಾಲ್ಕು ದಿನ ಸತತವಾಗಿ ಅಬ್ಬರಿಸಿದ ಮಳೆಗೆ 61,773 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ಬೆಳೆ ಹಾನಿಯಾಗಿದೆ. 16,202 ಹೆಕ್ಟೇರ್‌ ಪ್ರದೇಶದಲ್ಲಿನ ಹೆಸರು, 4,629 ಹೆಕ್ಟೇರ್‌ ಪ್ರದೇಶದಲ್ಲಿನ ಉದ್ದು, 13,444 ಹೆಕ್ಟೇರ್‌ ಪ್ರದೇಶದಲ್ಲಿ ಹುರಳಿ, 25,237 ಹೆಕ್ಟೇರ್‌ ಪ್ರದೇಶದಲ್ಲಿನ ಸೋಯಾ ಹಾಗೂ 2,261 ಹೆಕ್ಟೇರ್‌ ಪ್ರದೇಶದಲ್ಲಿನ ಇತರೆ ಬೆಳೆ ನಷ್ಟವಾಗಿದೆ.
ಭಾಲ್ಕಿ ಹಾಗೂ ಹುಮನಾದ್‌ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತುಂಬಿದ ಬ್ಯಾರೇಜ್‌ಗಳು

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ 7.316 ಟಿಎಂಸಿ ಅಡಿ ಪೈಕಿ 3.225 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಗುರುವಾರ ರಾತ್ರಿ ಪ್ರತಿ ಗಂಟೆಗೆ 7,604 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಶುಕ್ರವಾರ ಸಂಜೆ ವೇಳೆಗೆ ಒಳ ಹರಿವು ಕಡಿಮೆಯಾಗಿದೆ.
ಬಸವಕಲ್ಯಾಣ ತಾಲ್ಲೂಕಿನ ಮುಸ್ತಾಪುರ ಸಮೀಪದ ಚುಳಕಿನಾಳದ ಜಲಾಶಯ ಭರ್ತಿಯಾಗಲು ಒಂದು ಮೀಟರ್‌ ಬಾಕಿ ಇದೆ. ತಾಲ್ಲೂಕಿನ ನೀರಾವರಿ ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್ ಸಾವಿತ್ರಿ ಸಲಗರ ಸಮ್ಮುಖದಲ್ಲಿ ಜಲಾಶಯ ತುಂಬಿದರೆ ಗೇಟ್‌ ತೆರೆಯಲು ಪರಿಶೀಲನೆ ನಡೆಸಿದರು.

ಮಹಾರಾಷ್ಟ್ರದ ದೇವಣಿ ತಾಲ್ಲೂಕಿನ ತಗರಖೇಡಾದ ಬ್ಯಾರೇಜ್‌ ಭರ್ತಿಯಾಗಿದೆ. ಮಾಂಜ್ರಾ ಜಲಾಶಯದಿಂದ 116 ಕಿ.ಮೀ ಅಂತರದಲ್ಲಿರುವ ಡೋಂಗರಗಾಂವ್‌ ಬ್ಯಾರೇಜ್‌ ತುಂಬಿದ್ದು, ನೀರು ಹರಿಯ ಬಿಡಲಾಗುತ್ತಿದೆ. ಬ್ಯಾರೇಜ್‌ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಸ್ಥರು ನದಿಗೆ ಇಳಿಯದಂತೆ ಮಹಾರಾಷ್ಟ್ರದ ಉದಗಿರ ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸ್ಥಾನದಲ್ಲೇ ಇರುವಂತೆ ಅಧಿಕಾರಿಗಳಿಗೆ ಸೂಚನೆ

ಬೀದರ್‌: ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜನ ಜಿವನ ಅಸ್ತವ್ಯಸ್ಥ ಗೊಂಡಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿದು ಹಾನಿಯ ಬಗ್ಗೆ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸೂಚನೆ ನೀಡಿದ್ದಾರೆ.

ಮುಂದುವರಿದ ವಿದ್ಯುತ್‌ ಸಮಸ್ಯೆ

ಜಿಲ್ಲೆಯಲ್ಲಿ ವಿದ್ಯುತ್‌ ವ್ಯತ್ಯಯ ಶುಕ್ರವಾರವೂ ಮುಂದುವರಿಯಿತು. ಬೀದರ್‌ ನಗರ ಹಾಗೂ ಭಾಲ್ಕಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಟಿಸಿಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ನೌಬಾದ್, ಪ್ರತಾಪನಗರ ಹಾಗೂ ಮಾಧವನಗರದಲ್ಲಿ ಗುರುವಾರ ಸಂಜೆ ಕೈಕೊಟ್ಟಿದ್ದ ವಿದ್ಯುತ್ ಶುಕ್ರವಾರ ರಾತ್ರಿಯ ವರೆಗೆ ಬಂದಿರಲಿಲ್ಲ. ಜನ ಕತ್ತಲಲ್ಲೇ ಕುಳಿತು ದಿನ ಕಳೆಯಬೇಕಾಯಿತು. ಇಲ್ಲಿಯ ನಿವಾಸಿಗಳು ಜೆಸ್ಕಾಂ ಕಚೇರಿಗೆ ಅನೇಕ ಬಾರಿ ಫೋನ್‌ ಮಾಡಿದರೂ ಅಲ್ಲಿನ ಸಿಬ್ಬಂದಿ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪತ್ರಿಕೆಗಳ ಕಚೇರಿ ದೂರವಾಣಿ ಕರೆ ಮಾಡಿ ಕರೆಂಟ್‌ ಯಾವಾಗ ಬರುತ್ತದೆ ಎಂದು ವಿಚಾರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.