ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಹೋಬಳಿಯಲ್ಲಿನ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಕ್ಕೆ ಸಹಾಯಕ ಕೃಷಿ ನಿರ್ದೇಶಕ ಗೌತಮ ಮತ್ತಿತರರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
‘ಲಾಡವಂತಿ, ಲಾಡವಂತಿವಾಡಿ ಮತ್ತು ಪಹಾಡ ವ್ಯಾಪ್ತಿಯಲ್ಲಿನ ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಲಾಗಿದೆ. ನಾಲೆ ಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿ ಹಾನಿ ಆಗಿದೆ. ಇನ್ನೂ ಸಮೀಕ್ಷಾ ಕಾರ್ಯ ಪೂರ್ಣಗೊಂಡಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಅಧಿಕಾರಿಗಳು ಬಾರದೆ ಬೇಸರ: ಕೊಹಿನೂರ ವಾಡಿ ವ್ಯಾಪ್ತಿಯಲ್ಲೂ ಹಳ್ಳದ ನೀರು ಹೊಲಗಳಲ್ಲಿ ನುಗ್ಗಿದ್ದರಿಂದ ಸಾಕಷ್ಟು ಬೆಳೆ ಕೊಚ್ಚಿಕೊಂಡು ಹೋಗಿ ಹಲವಾರು ಜನರಿಗೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸುವುದಕ್ಕಾಗಿ ಅಧಿಕಾರಿಗಳು ಬರುತ್ತಿದ್ದಾರೆಂದು ಗ್ರಾಮ ಸಹಾಯಕರು ಹೇಳಿದ್ದರಿಂದ ರೈತರು ಸಂಜೆವರೆಗೆ ಹೊಲಗಳಲ್ಲಿಯೇ ಇದ್ದರೂ ಯಾರೂ ಬರಲಿಲ್ಲ ಎಂದು ಗ್ರಾಮದ ರೈತ ಮಧುಕರ ಘೋಡಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸರ್ವೇ ನಂಬರ್ 112ರಿಂದ ಸರ್ವೇ ನಂಬರ್ 117 ರವರೆಗೆ ಅನೇಕ ರೈತರ ಹೊಲಗಳಲ್ಲಿ ನೀರು ಸಂಗ್ರಹಗೊಂಡಿದೆ. ಬೆಳೆ ಮತ್ತು ಮಣ್ಣು ಕೊಚ್ಚಿಕೊಂಡು ಹೋಗಿದೆ. ಆದ್ದರಿಂದ ಶೀಘ್ರ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.