ADVERTISEMENT

ಬೀದರ್‌: ₹ 12.56 ಲಕ್ಷ ಮೌಲ್ಯದ ಖರ್ಜೂರ ಮಾರಾಟ

ಈದ್‌–ಉಲ್‌ ಫಿತ್ರ್‌: ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರು

ಚಂದ್ರಕಾಂತ ಮಸಾನಿ
Published 2 ಜೂನ್ 2019, 19:30 IST
Last Updated 2 ಜೂನ್ 2019, 19:30 IST
ಬೀದರ್‌ನ ಗವಾನ್‌ ಚೌಕ್‌ ರಸ್ತೆಯಲ್ಲಿರುವ ಹಣ್ಣಿನ ಅಂಗಡಿಯಲ್ಲಿ ಹಣ್ಣು ಖರೀದಿಸಿದ ಗ್ರಾಹಕ
ಬೀದರ್‌ನ ಗವಾನ್‌ ಚೌಕ್‌ ರಸ್ತೆಯಲ್ಲಿರುವ ಹಣ್ಣಿನ ಅಂಗಡಿಯಲ್ಲಿ ಹಣ್ಣು ಖರೀದಿಸಿದ ಗ್ರಾಹಕ   

ಬೀದರ್‌: ಈದ್‌–ಉಲ್‌ ಫಿತ್ರ್‌ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಬಾನಿನಿಂದ ಜಾರುತ್ತಲೇ ಐತಿಹಾಸಿಕ ನಗರದಲ್ಲಿ ಬಣ್ಣದ ದೀಪಗಳು ಹೊತ್ತಿಕೊಳ್ಳುತ್ತಿವೆ. ಡಾ.ಅಂಬೇಡ್ಕರ್‌ ವೃತ್ತದಿಂದ ಗವಾನ್‌ ಚೌಕ್‌ ವರೆಗಿನ ರಸ್ತೆಯ ಎರಡೂ ಬದಿಯಲ್ಲಿರುವ ಅಂಗಡಿಗಳು ಝಗಮಗಿಸುವ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. ಬೆಳಗಿನ ಜಾವದ ವರೆಗೂ ಹೊಸ ಲೋಕವೇ ಸೃಷ್ಟಿಯಾಗುತ್ತಿದೆ.

ದರ್ಜಿ ಗಲ್ಲಿಯಲ್ಲಿ ಮಹಿಳೆಯರ ಸೌಂದರ್ಯ ಪ್ರಸಾದನ, ಬಳೆ, ಚೂಡಿದಾರ, ಬುರ್ಖಾ, ಹಿಜಬ್‌, ಸೀರೆಗಳ ಮಾರಾಟ ನಡೆದಿದೆ. ಹಬ್ಬಕ್ಕೆ ಬಟ್ಟೆಗಳನ್ನು ಖರೀದಿಸಲು ಮುಸ್ಲಿಂ ಮಹಿಳೆಯರು ತಂಡೋಪತಂಡವಾಗಿ ಬರುತ್ತಿದ್ದಾರೆ. ರಂಜಾನ್‌ನಲ್ಲಿ ಕಡಿಮೆ ಬೆಲೆಗೆ ಬಟ್ಟೆ ಮಾರಾಟವಾಗುತ್ತವೆ ಎನ್ನುವ ನಂಬಿಕೆ ನಗರದ ಜನರಲ್ಲಿ ಇದೆ. ಹೀಗಾಗಿ ಬೇರೆ ಸಮುದಾಯದ ಮಹಿಳೆಯರೂ ರಾತ್ರಿ ವೇಳೆಯಲ್ಲಿ ಬಟ್ಟೆಗಳನ್ನು ಖರೀದಿಸಲು ಮಾರುಕಟ್ಟೆಗೆ ಬರುತ್ತಿದ್ದಾರೆ.

ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಓಲ್ಡ್‌ಸಿಟಿಯಲ್ಲಿ ಬಟ್ಟೆಗಳ ಅಂಗಡಿಗಳ ಮಾಲೀಕರಿಗೆ ಒಂದಿಷ್ಟೂ ಬಿಡುವು ಇಲ್ಲ. ರಾತ್ರಿಯಿಡಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಟಕಲ್‌ಪುರ ರಸ್ತೆ ಉದ್ದಕ್ಕೂ ತಾತ್ಕಾಲಿಕ ಅಂಗಡಿಗಳಳು ತೆರೆದುಕೊಂಡಿವೆ. ಬಳೆ, ಮಹಿಳೆಯರ ಅಲಂಕಾರಿಕ ಸಾಧನಗಳು, ಗೃಹೋಪಯೋಗಿ ವಸ್ತುಗಳು, ಆಟಿಕೆ ಸಾಮಗ್ರಿಗಳು ಹಾಗೂ ಬಗೆ ಬಗೆಯ ಖಾದ್ಯಗಳನ್ನು ಮಾರಾಟಕ್ಕೆ ಇಡಲಾಗಿದೆ.

ADVERTISEMENT

ಬೀದರ್ ನಗರವೊಂದಕ್ಕೇ ಒಂದು ಲಾರಿ ಖರ್ಜೂರ ಬಂದಿದೆ. ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾದ ಖರ್ಜೂರವನ್ನು ಗಾತ್ರ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕೆ.ಜಿಗೆ ₹ 80 ರಿಂದ ₹ 1,600 ವರೆಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ 16 ಬಗೆಯ ಖರ್ಜೂರ ಲಭ್ಯ ಇವೆ.

‘ರಂಜಾನ್‌ ಮಾಸದಲ್ಲಿ ಸಂಜೆ ಪ್ರಾರ್ಥನೆ ಬಳಿಕ ಉಪವಾಸ ಅಂತ್ಯಗೊಳಿಸುತ್ತಾರೆ. ಉಪವಾಸ ಬಿಡುವಾಗ ಕನಿಷ್ಠ ಐದು ಖರ್ಜೂರಗಳನ್ನು ಸೇವಿಸುವುದು ವಾಡಿಕೆ. ಹೀಗಾಗಿ ಕೆಲವರು ತಿಂಗಳಿಗೆ ಬೇಕಾಗುವಷ್ಟು ಖರ್ಜೂರವನ್ನು ಒಂದೇ ಬಾರಿಗೆ ಖರೀದಿಸಿಕೊಂಡು ಹೋಗಿದ್ದಾರೆ. ಕೆಲವರು ವಾರಕ್ಕೊಮ್ಮೆ, ಇನ್ನು ಕೆಲವರು ಅನುಕೂಲಕ್ಕೆ ತಕ್ಕಂತೆ ಖರ್ಜೂರ ಕೊಂಡುಕೊಳ್ಳುತ್ತಿದ್ದಾರೆ. 20 ದಿನಗಳ ಅವಧಿಯಲ್ಲಿ ಬೀದರ್ ನಗರವೊಂದರಲ್ಲೇ ₹ 12.56 ಲಕ್ಷ ಮೌಲ್ಯದ ಖರ್ಜೂರ ಮಾರಾಟವಾಗಿದೆ’ ಎಂದು ಖರ್ಜೂರ ಸಗಟು ವ್ಯಾಪಾರಿ ನರೇಂದ್ರ ಗಾದಾ ವಿವರಿಸುತ್ತಾರೆ.

‘ಅಜ್ವಾ’ ಖರ್ಜೂರ ಪ್ರತಿ ಕೆಜಿಗೆ ₹ 1,600ಗೆ ಮಾರಾಟವಾಗುತ್ತಿದೆ. ಪ್ರವಾದಿ ಮಹಮ್ಮದ್‌ ಅವರು ‘ಅಜ್ವಾ’ ಖರ್ಜೂರ ಗಿಡವನ್ನು ನೆಟ್ಟಿ ಬೆಳೆಸಿದ್ದರು ಎನ್ನುವ ನಂಬಿಕೆ ಇದೆ. ಇದರ ಗುಣಮಟ್ಟವೂ ಚೆನ್ನಾಗಿದೆ. ಇದೇ ಕಾರಣಕ್ಕೆ ಅದರ ಬೆಲೆ ಅಧಿಕವಾಗಿದೆ’ ಎಂದು ಶಾಹೇದ್‌ ಅಲಿ ಹೇಳುತ್ತಾರೆ.

ಈದ್‌–ಉಲ್‌ ಫಿತ್ರ್‌ ಹಬ್ಬ ಸಂಪೂರ್ಣ ಸಂಭ್ರಮದಿಂದ ಕೂಡಿರಬೇಕು. ನಾವು ಧರಿಸುವ ಬಟ್ಟೆ, ಆಭರಣ ಹಾಗೂ ಪಾದರಕ್ಷಯೂ ಹೊಸದು ಇರಬೇಕು ಎಂದು ಬಯಸುತ್ತಾರೆ ಮುಸ್ಲಿಮರು. ಅಂತೆಯೇ ಹೈದರಾಬಾದ್, ಮುಂಬೈ ಹಾಗೂ ಪುಣೆಯ ವ್ಯಾಪಾರಿಗಳು 15 ದಿನ ಮೊದಲೇ ನಗರಕ್ಕೆ ಬಂದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಸ್ತೆ ಬದಿಗೆ ಕೈಗೆಟುವ ಬೆಲೆಯಲ್ಲಿ ಬಟ್ಟೆಗಳು ದೊರೆಯುವುದರಿಂದ ಬಟ್ಟೆ ಖರೀದಿಗೆ ಮುಸ್ಲಿಮರು ಮುಗಿ ಬೀಳುತ್ತಿದ್ದಾರೆ.

ಯುವಕರು ಬಣ್ಣದ ಆಕರ್ಷಕ ಟೊಪ್ಪಿಗೆ, ಕುರ್ತಾ, ಪೈಜಾಮ್‌, ಜೀನ್ಸ್‌ ಪ್ಯಾಂಟ್, ಶರ್ಟ್‌ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸದ ಗಾಜಿನ ಬಾಟಲಿಗಳಲ್ಲಿ ಹಾಗೂ ಪ್ಯಾಕೇಟ್‌ಗಳಲ್ಲಿ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆಯೇ ಸುಗಂಧ ದ್ರವ್ಯಗಳ ಪರಿಮಳ ಸೂಸುತ್ತಿದೆ. ವ್ಯಾಪಾರಿಗಳು ಗ್ರಾಹಕರ ಕೈಗೆ ಸುಗಂಧ ದ್ರವ್ಯ ಸಿಂಪಡಿಸಿ ಪರಿಮಳವನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಗಮನ ಸೆಳೆಯುತ್ತಿದೆ ಖಾದ್ಯ ಪದಾರ್ಥ
ಹಲವು ಬ್ರಾಂಡ್‌ಗಳ ಶ್ಯಾವಿಗೆ ಮಾರುಕಟ್ಟೆಯಲ್ಲಿ ಲಭ್ಯ ಇದೆ. ಪಾಯಸ ತಯಾರಿಸಿ ಆಪ್ತರಿಗೆ ಹಾಗೂ ಗೆಳೆಯರಿಗೆ ಹಂಚುವ ಸಂಪ್ರದಾಯ ಇರುವ ಕಾರಣ ಶ್ಯಾವಿಗೆ ಖರೀದಿ ಸಹ ಜೋರಾಗಿಯೇ ನಡೆದಿದೆ. ಮನೆಯಲ್ಲಿ ತಯಾರಿಸಿದ ಶ್ಯಾವಿಗೆ ಹಾಗೂ ಯಂತ್ರದಲ್ಲಿ ತಯಾರಿಸಿದ ಶ್ಯಾವಿಗೆ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.

ಚೌಬಾರಾದಿಂದ ಗವಾನ್‌ ಸ್ಮಾರಕದ ವರೆಗೂ ಮಾಂಸಾಹಾರಿ ಖಾದ್ಯಗಳ ಅಂಗಡಿಗಳು ತೆರೆದುಕೊಂಡಿವೆ. ಮಾಂಸಾಹಾರಿ ಅಂಗಡಿಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಟನ್‌– ಚಿಕನ್‌ ಸಮೋಸಾ, ಚಿಕನ್‌ ರೋಲ್‌, ಕಬಾಬ್‌, ಬಿರ್ಯಾನಿಯನ್ನು ಸಾಲಿನಲ್ಲಿ ನಿಂತು ಸೇವಿಸುತ್ತಿದ್ದಾರೆ.

ಉದಗಿರ ರಸ್ತೆ, ಡಾ.ಅಂಬೇಡ್ಕರ್‌ ವೃತ್ತ, ನಯಿಕಮಾನ್, ಚೌಬಾರಾ ರಸ್ತೆಯಲ್ಲಿ ಅಲ್ಲಲ್ಲಿ ಹರೀಸ್‌ ತಯಾರಿಕೆಯ ಅಂಗಡಿಗಳು ತಲೆ ಎತ್ತಿವೆ. ಸೌದಿ ಅರೆಬಿಯಾದ ಜನಪ್ರಿಯ ಖಾದ್ಯ ಮಾಂಸದ ಸೂಪ್ ‘ಹರೀಸ್‌’ ಬೀದರ್‌ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಈಗ ಹೈದರಾಬಾದ್‌ನ ಬಾಣಸಿಗರು ನಗರಕ್ಕೆ ಬಂದು ಹರೀಸ್‌ ಸಿದ್ಧಪಡಿಸುತ್ತಿರುವುದರಿಂದ ಖಾದ್ಯಪ್ರಿಯರು ಸಂಜೆಯಾಗುತ್ತಲೇ ಹರೀಸ್‌ ಸೇವಿಸಲು ಹೋಟೆಲ್‌ಗಳಲ್ಲಿ ಮುಗಿ ಬೀಳುತ್ತಿದ್ದಾರೆ.

ಹಣ್ಣಿಗೆ ಹೆಚ್ಚಿದ ಬೇಡಿಕೆ
ಬಿಸಿಲು ಹಾಗೂ ಧಗೆ ಅಧಿಕ ಇರುವ ಕಾರಣ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ರಂಜಾನ್‌ ವೃತಾಚರಣೆಯಲ್ಲಿ ತೊಡಗಿರುವ ಮುಸ್ಲಿಮರು ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಹಣ್ಣುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ.

‘ಕಲ್ಲಂಗಡಿ, ಮಾವಿನಹಣ್ಣು, ಸೇಬು ಹಾಗೂ ಸಂತ್ರಾ ಹೆಚ್ಚು ಮಾರಾಟವಾಗುತ್ತಿವೆ. ಗ್ರಾಹಕರ ಆಕರ್ಷಣೆ ಹೆಚ್ಚಿಸಲು ಚೀನಾದ ಡ್ರ್ಯಾಗನ್‌ ಹಾಗೂ ನ್ಯೂಜಿಲ್ಯಾಂಡ್‌ನ ಕಿವಿ ಹಣ್ಣುಗಳು ಸಹ ಮಾರಾಟವಾಗುತ್ತಿವೆ. ಕಿವಿ ₹ 80ಕ್ಕೆ ಹಾಗೂ ಡ್ರ್ಯಾಗನ್‌ ₹ 100ಗೆ ಮಾರಾಟವಾಗುತ್ತಿವೆ. ಹೊಸ ಹಣ್ಣುಗಳ ರುಚಿ ನೋಡಲು ಗ್ರಾಹಕರು ಆಸಕ್ತಿಯಿಂದ ಕೊಂಡೊಯ್ಯುತ್ತಿದ್ದಾರೆ’ ಎಂದು ಹಣ್ಣಿನ ಸಗಟು ವ್ಯಾಪಾರಿ ಬಸೀರ್‌ ಅಹಮ್ಮದ್‌ ಹೇಳುತ್ತಾರೆ.

‘ಸ್ಟ್ರಾಬೇರಿಗೆ ಬೇಡಿಕೆ ಇದ್ದರೂ ಮಾರುಕಟ್ಟೆಗೆ ಬಂದಿಲ್ಲ. ಸೇಬು ಪ್ರತಿ ಕೆ.ಜಿಗೆ ₹ 180ರಿಂದ ₹ 200ರ ವರೆಗೆ ಮಾರಾಟವಾಗುತ್ತಿದೆ. ರಂಜಾನ್‌ ಹಬ್ಬದೊಂದಿಗೆ ಬೇಸಿಗೆಯೂ ಮುಗಿಯಲಿದೆ. ಈ ಬಾರಿ ರಂಜಾನ್‌ನಲ್ಲಿ ಉತ್ತಮ ವ್ಯಾಪಾರ ಆಗಿದೆ’ ಎಂದು ನಗೆ ಬೀರುತ್ತಾರೆ ಬಸೀರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.