ADVERTISEMENT

ರಂಭಾಪುರಿ ಪೀಠದಿಂದ ಹಿಂದೂ ಧರ್ಮಕ್ಕೆ ದೊಡ್ಡ ಕೊಡುಗೆ: ಸಚಿವ ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 16:26 IST
Last Updated 26 ಸೆಪ್ಟೆಂಬರ್ 2025, 16:26 IST
<div class="paragraphs"><p>ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು</p></div>

ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು

   

ಬಸವಕಲ್ಯಾಣ (ಬೀದರ್‌ ಜಿಲ್ಲೆ): `ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಾಳೆಹೊನ್ನೂರು ರಂಭಾಪುರಿ ಪೀಠವು ಹಿಂದೂ ಧರ್ಮ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದೆ' ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ಪಟ್ಟರು.

ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ADVERTISEMENT

`ಆದರೆ, ಕೆಲವರಿಂದ ಭಾಷೆ, ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ಧರ್ಮ ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ದೇಶ ಮೇಲಕ್ಕೆ ಹೋಗುತ್ತಿದೆ. ಹಿಂದೆ ದುರ್ಬಲ ಆರ್ಥಿಕ ವ್ಯವಸ್ಥೆ ಇತ್ತು. ಆದರೆ, ಈಗ ನಮ್ಮೆಲ್ಲರ ಪ್ರಯತ್ನದಿಂದ ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಿದೆ. ಇದು ಕೆಲವರಿಗೆ ಹಿಡಿಸುತ್ತಿಲ್ಲ' ಎಂದರು.

`ಹಿಂದೂ ಧರ್ಮದ ಕೌಟುಂಬಿಕ ಮತ್ತು ಆಹಾರ ಪದ್ಧತಿ ಶ್ರೇಷ್ಠವಾದದ್ದು. ಆಧ್ಯಾತ್ಮಿಕ ಬಲ ಹೊಂದಿರುವಂಥದ್ದು. ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಸಹ ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಧ್ಯೇಯೋದ್ದೇಶದಿಂದ ಶ್ರಮಿಸುತ್ತಿದ್ದಾರೆ. ಬಸವಣ್ಣನವರು ದಯವೇ ಧರ್ಮದ ಮೂಲವೆಂದರು. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಪಂಚಪೀಠಗಳ ಘೋಷವಾಕ್ಯವಾಗಿದೆ. ಇದರಲ್ಲಿ ‘ಸರ್ವೇಜನಾಃ ಸುಖಿನೋಭವಂತು’ ಎಂಬ ಭಾರತೀಯ ಭವ್ಯ ಪರಂಪರೆ ಪ್ರತಿಬಿಂಬಿತವಾಗಿದೆ. ಶಿವ ಮತ್ತು ಐಕ್ಯಕ್ಕೆ ಮಹತ್ವ ನೀಡುವ ರೇಣುಕಾಚಾರ್ಯರ ಸಂದೇಶ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಇದ್ದು ಅದನ್ನು ಎಲ್ಲರೂ ಅನುಸರಿಸಬೇಕು' ಎಂದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಶಾಸಕ ಶರಣು ಸಲಗರ, ಪ್ರಭು ಚವ್ಹಾಣ್, ಬಿಚಕುಂದ ಸೋಮಲಿಂಗ ಶಿವಾಚಾರ್ಯರು, ಶಿವಪ್ರಕಾಶ ಶಿವಾಚಾರ್ಯರು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪ್ರೊ.ರುದ್ರೇಶ್ವರಸ್ವಾಮಿ ಗೋರಟಾ, ರಮೇಶ ಶಿವಪುರ ಮಾತನಾಡಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಪ್ರಕಾಶ ಖಂಡ್ರೆ, ಪ್ರದೀಪ ವಾತಡೆ ಉಪಸ್ಥಿತರಿದ್ದರು. ಪಂಚಾಕ್ಷರಿ ಹಿರೇಮಠ, ಶಿವಯ್ಯ ಸ್ವಾಮಿ ಕಮಠಾಣ, ಗಂಗಾಧರ ಮಠಪತಿ ಅವರಿಗೆ ವಿಶೇಷ ಗುರುರಕ್ಷೆ ನೀಡಲಾಯಿತು. ಗುರುಲಿಂಗಯ್ಯ ಹಿತ್ತಲಶೀರೂರ ಸಂಗೀತ ಪ್ರಸ್ತುತಪಡಿಸಿದರು. ಶ್ರದ್ಧಾ ಪಾಟೀಲ ಯೋಗ ನೃತ್ಯ ಪ್ರದರ್ಶಿಸಿದರು.

ರಂಭಾಪುರಿ ಪೀಠ ಅಗ್ರ ಶಕ್ತಿ ಪೀಠ: ಮಾಜಿ ಸಂಸದ ಬಸವರಾಜ ಪಾಟೀಲ

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, `ರಂಭಾಪುರಿ ಪೀಠವು ಪಂಚ ಪೀಠಗಳಲ್ಲಿ ಅಗ್ರ ಶಕ್ತಿ ಪೀಠವಾಗಿದೆ. ಈ ಪೀಠದಿಂದ ದಸರಾ ಧರ್ಮ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಆದರೆ, ಅನೇಕರು ಇಂಥ ವೈಭವದ ಉತ್ಸವ ಏಕೆ? ಎಂದು ಪ್ರಶ್ನಿಸುವವರಿದ್ದಾರೆ. ಆಚಾರ್ಯ ಪರಂಪರೆ ಮತ್ತು ಶರಣ ಸಂಸ್ಕೃತಿ ಬೇರೆ ಬೇರೆ ಆಗಿರಬಾರದು. ಪಂಚಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ, ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸು ಬಯಸುವವರಾಗಿದ್ದಾರೆ. ಎರಡೂ ತತ್ವಗಳು ಒಂದೇ ಆಗಿವೆ. ಹೀಗಾಗಿ ಶಿವಾಚಾರ್ಯರು ರೂಢಿಯಲ್ಲಿ ಕೆಲ ಬದಲಾವಣೆ ತಂದು ಹೊಸತನ ತೋರಬೇಕು. ಸಮಾಜದಲ್ಲಿ ಒಗ್ಗಟ್ಟು ಮೂಡಿಸಬೇಕು. ಜಗತ್ತಿಗೆ ಬೆಳಕು ಕೊಡುವ ಶಕ್ತಿ ವೀರಶೈವ ಲಿಂಗಾಯತ ಧರ್ಮಕ್ಕೆ ಮಾತ್ರ ಇರುವುದರಿಂದ ಇಂಥ ಐಕ್ಯತೆ ಅಗತ್ಯವಾಗಿದೆ' ಎಂದರು.

ವೀರಶೈವ ಲಿಂಗಾಯತ ಸಮಾಜ ಒಡೆಯುವ ವ್ಯವಸ್ಥಿತ ಸಂಚು: ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು

`ಸಮೀಕ್ಷೆ ಹೆಸರಲ್ಲಿ ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ತಂದು ವೀರಶೈವ ಲಿಂಗಾಯತ ಸಮಾಜ ಒಡೆಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬುದನ್ನು ಸಮಾಜ ಬಾಂಧವರು ಗಂಭೀರವಾಗಿ ಪರಿಗಣಿಸಬೇಕು' ಎಂದು ಬಾಳೆ ಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

`ವೀರಶೈವ ಲಿಂಗಾಯತ ಒಂದೇ ಆಗಿದೆ. ಈ ಧರ್ಮ ಸ್ವತಂತ್ರ ಧರ್ಮ ಆಗಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ಹಲವಾರು ಸಲ ನಾವು ಪ್ರಯತ್ನಿಸಿದ್ದೇವೆ. ದೊಡ್ಡ ಸಮಾವೇಶಗಳನ್ನು ಆಯೋಜಿಸಿದ್ದೇವೆ. ಅದರಲ್ಲಿ ಗುರು-ವಿರಕ್ತರು ಪಾಲ್ಗೊಂಡಿದ್ದರೂ ನಮ್ಮ ಉದ್ದೇಶ ಈಡೇರಲಿಲ್ಲ. ಬೆರಳೆಣಿಕೆಯ ಜನ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಮಕಾಲೀನ ಸಮಾಜದ ಸಮಸ್ಯೆ ಅರಿತು ಸಾಗುವುದಕ್ಕೆ ನಾವು ಒಂದು ಹೆಜ್ಜೆ ಮುಂದಿದ್ದೇವೆ. ಆದರೆ ಇದಕ್ಕೆ ಕೆಲವರು ವಿರೋಧಿಸುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.