ADVERTISEMENT

ರಂಭಾಪುರಿ ಸ್ವಾಮೀಜಿ ಹೇಳಿಕೆ ಬಸವಾದಿ ಶರಣರಿಗೆ ಅಪಮಾನ: ಬಸವರಾಜ ಧನ್ನೂರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 16:26 IST
Last Updated 5 ಮಾರ್ಚ್ 2025, 16:26 IST
ಬಸವರಾಜ ಧನ್ನೂರ
ಬಸವರಾಜ ಧನ್ನೂರ   

ಬೀದರ್: ‘ಲಿಂಗಾಯತ ಧರ್ಮವೇ ಅಲ್ಲವೆಂದು’ ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆ ಬಸವಾದಿ ಶರಣರಿಗೆ ಮಾಡಿರುವ ಅಪಮಾನ  ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

‘ವೀರಶೈವ ಸೈದ್ಧಾಂತಿಕ ಧರ್ಮ. ಲಿಂಗಾಯತ ಪದ ರೂಢಿಯಿಂದ ಬಂದದ್ದು. ಅದು ಧರ್ಮವಾಗಲು ಸಾಧ್ಯವೇ ಇಲ್ಲ' ಎಂಬ ಸ್ವಾಮೀಜಿ ಹೇಳಿಕೆ ಯಾರೂ ಒಪ್ಪುವಂತಹದ್ದಲ್ಲ. ಲಿಂಗಾಯತ ಧರ್ಮ ಬಸವಣ್ಣನವರು ಸ್ಥಾಪಿಸಿದ ಧರ್ಮ. ವೀರಶೈವ ಧರ್ಮ ಅಲ್ಲ. ಲಿಂಗಾಯತ ಧರ್ಮದ 102 ಒಳ ಪಂಗಡಗಳಲ್ಲಿ ಅದು ಕೂಡ ಒಂದು ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಗಾಯತ ಧರ್ಮ ಉದಯವಾದದ್ದು 12ನೇ ಶತಮಾನದಲ್ಲಿ. ಇಷ್ಟಲಿಂಗ ಧರಿಸುವವರೆಲ್ಲ ಲಿಂಗಾಯತರು. ಬಸವಣ್ಣನವರು ಇಷ್ಟಲಿಂಗದ ಜನಕ. ಅವರಿಗಿಂತ ಮುಂಚೆ ಇಷ್ಟಲಿಂಗದ ಪರಿಕಲ್ಪನೆ ಇರಲಿಲ್ಲ. ಒಂದೆಡೆ ಬಸವಣ್ಣನವರು ಸಮಾಜ ಒಗ್ಗೂಡಿಸುವ ಕೆಲಸ ಮಾಡಿದ್ದರು ಎಂದು ಹೇಳುತ್ತ, ಮತ್ತೊಂದೆಡೆ ಅವರು ಸ್ಥಾಪಿಸಿದ ಲಿಂಗಾಯತ ಧರ್ಮವು ಧರ್ಮವಲ್ಲ ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಏಕಕಾಲಕ್ಕೆ ಎರಡು ದೋಣಿಗಳಲ್ಲಿ ಸಂಚರಿಸಲು ಆಗುವುದಿಲ್ಲ. ಆದಕಾರಣ ಸ್ವಾಮೀಜಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಲಿಂಗಾಯತ ಧರ್ಮವೇ ಅಲ್ಲ ಎನ್ನುವುದಾದರೆ ಸ್ವಾಮೀಜಿ ಬಸವಾದಿ ಶರಣರ ಬಗ್ಗೆ ಪ್ರಸ್ತಾಪಿಸದಿರುವುದೇ ಒಳ್ಳೆಯದು ಎಂದು ಸಲಹೆ ಮಾಡಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡು ಐದೇ ವರ್ಷಗಳಾದರೂ ಸಂಸ್ಥೆಗೆ ನಾಡಿನಾದ್ಯಂತ ಸಾವಿರಾರು ಜನ ಸ್ವಯಂ ಪ್ರೇರಣೆಯಿಂದ ಸದಸ್ಯರಾಗಿದ್ದಾರೆ. ಸಂಸ್ಥೆ ಲಿಂಗಾಯತ ಧರ್ಮದ ಸಂಘಟನೆ ಹಾಗೂ ಬಸವ ತತ್ವ ಪ್ರಚಾರಕ್ಕೆ ಹಗಲಿರುಳು ಶ್ರಮಿಸುತ್ತಿದೆ. ಶರಣರ ಆಶಯ ಹಾಗೂ ತತ್ವಗಳಿಗೆ ಚ್ಯುತಿ ತರುವ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

ಸಂಸ್ಥೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಎಲ್ಲರ ಬಗ್ಗೆಯೂ ಗೌರವ ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಸಮುದಾಯದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡುವ ದಿಸೆಯಲ್ಲೇ ಹೆಜ್ಜೆ ಇಡುತ್ತಿದೆ. ಅದಾಗಿಯೂ ಜಾಗತಿಕ ಲಿಂಗಾಯತ ಮಹಾಸಭೆಯನ್ನು ತೆಗಳುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಕೇಳಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಸಮಾಜವನ್ನು ಛಿದ್ರಗೊಳಿಸುತ್ತಿಲ್ಲ. ಸಂಘಟಿಸುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ದೊರೆತರೆ ಛಿದ್ರವಾಗಿರುವ ಲಿಂಗಾಯತದ ಎಲ್ಲ ಒಳಪಂಗಡಗಳೂ ಒಂದಾಗಲಿವೆ. ಸಮಾಜದಲ್ಲಿರುವ ಬಡವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸಿಗಲಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯೇ ಮಹಾಸಭಾದ ಗುರಿ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ದೊರಕಿತ್ತು. ಆಗಲೇ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತಿತ್ತು. ಆದರೆ, ಕೆಲವರು ಸಮಾಜದ ದಿಕ್ಕು ತಪ್ಪಿಸಿದ್ದರಿಂದಲೇ ಮಾನ್ಯತೆ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.