
ಹುಲಸೂರ: ಒಟಿಪಿ ಮೂಲಕ ಪಡಿತರ ಪಡೆಯುತ್ತಿದ್ದ ಕುಟುಂಬದ ಒಬ್ಬ ಸದಸ್ಯರು ಈಗ ಬೆರಳಚ್ಚು ನೀಡುವುದು ಕಡ್ಡಾಯ. ಆದರೆ, ವಯಸ್ಸಾದ ಕಾರಣ ಕೆಲವರ ಬೆರಳಚ್ಚು ಸವೆದು ಕೈಗಳು ನಡುಗುವುದರಿಂದ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ಜನ ಪಡಿತರದಿಂದ ವಂಚಿತರಾಗುತ್ತಿದ್ದಾರೆ.
ಪಟ್ಟಣ ಸೇರಿ ಮಿರಕಲ, ಗಡಿಗೌಡಗಾಂವ, ಬೇಲೂರ, ಗೋರಟಾ, ಮುಚಳಂಬ, ಸಾಯಗಾಂವ ಹೋಬಳಿಯ ಹಲಸಿ ತುಗಾಂವ, ವಾಂಜರಖೇಡ, ಮೆಹಕರ, ಅಟ್ಟರಗಾ ಹಾಗೂ ಅಳವಾಯಿ ಗ್ರಾಮ ಪಂಚಾಯಿತಿಗಳಲ್ಲಿ ವಯಸ್ಸಾದವರು ಹಾಗೂ ಅನಾರೋಗ್ಯಕ್ಕೆ ಒಳಗಾದವರು ಪಡಿತರದಿಂದ ವಂಚಿತರಾಗುತ್ತಿದ್ದಾರೆ.
ಕುಟುಂಬದಲ್ಲಿ ಬೆರಳಚ್ಚು ನೀಡುವಷ್ಟು ಆರೋಗ್ಯವಂತರಿದ್ದರೆ ಪಡಿತರ ಸಿಗುತ್ತದೆ. ಉಳಿದ ಜನರ ಸಮಸ್ಯೆ ಬಗೆಹರಿಸುವವರು ಇಲ್ಲದಂತಾಗಿದೆ ಎನ್ನುವುದು ನೊಂದವರ ಅಳಲು.
ತೀರಾ ವಯಸ್ಸಾದವರು ಮತ್ತು ಪಡಿತರ ಕೇಂದ್ರಗಳಿಗೆ ತೆರಳಿ ಪಡಿತರ ಪಡೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ಇರುವವರಿಗೆ ಬೆರಳಚ್ಚು ನೀಡುವ ನಿಯಮದಿಂದ ತೀವ್ರ ಸಮಸ್ಯೆಯಾಗಿದೆ. ಅಧಿಕಾರಿಗಳು ನೆರವಿಗೆ ಬರಬೇಕು ಎನ್ನುತ್ತಾರೆ ಸಾರ್ವಜನಿಕರು.
ಈ ಹಿಂದೆ ಮೊಬೈಲ್ ಒಟಿಪಿ ಮೂಲಕ ಪಡಿತರ ನೀಡಲಾಗುತ್ತಿತ್ತು. ಈಗ ರೇಷನ್ ಪಡೆಯಲು ನನ್ನ ಬೆರಳಚ್ಚು ಬರುತ್ತಿಲ್ಲ. ನನ್ನ ಮೊಮ್ಮಕ್ಕಳ ಬೆರಳಚ್ಚು ಕೂಡ ಬರುತ್ತಿಲ್ಲ. ವಿಚಾರಿಸಿದರೆ ಅವರ ಬೆರಳಚ್ಚು ಅಪ್‌ಡೇಟ್ ಮಾಡಿ ಎನ್ನುತ್ತಾರೆ. ನಮಗೆ ದಿಕ್ಕು ತೋಚದಂತಾಗಿದೆ ಎಂದು ರಂಗರಾವ ಬಿರಾದಾರ ಅಳಲು ತೋಡಿಕೊಂಡರು.
‘ಬೆರಳಚ್ಚು ಬಾರದ ಕಾರಣ ಪಡಿತರ ಸಿಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಲಿ’ ಎಂದು ಜಿ.ಪಂ ಮಾಜಿ ಸದಸ್ಯ ಮಲ್ಲಪ್ಪಾ ಧಬಾಲೆ ಆಗ್ರಹಿಸಿದ್ದಾರೆ.
‘ಪಡಿತರ ಸೌಲಭ್ಯದಿಂದ ವಂಚಿತರಾಗದ ರೀತಿಯಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆರಳಚ್ಚು ನೀಡುವಾಗ ಆಗುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ರಾಜೇಂದ್ರ ಪ್ರಸಾದ ಹೇಳಿದರು.
ನನಗೆ ವಯಸ್ಸಾಗಿದ್ದು ಹೆಬ್ಬೆರಳು ಗುರುತು ಬಾರದಿರುವುದಕ್ಕೆ ಪಡಿತರ ಸಿಗುತ್ತಿಲ್ಲ. ನನಗೆ ಗಂಡ ಮಕ್ಕಳು ಯಾರೂ ಇಲ್ಲ.ಶಾಂತಮ್ಮ ಸೂರ್ಯವಂಶಿ ಹುಲಸೂರ ನಿವಾಸಿ
ಮೊಬೈಲ್ ಒಟಿಪಿ ಮೂಲಕ ಪಡಿತರ ನೀಡುವ ವ್ಯವಸ್ಥೆ ಮಾಡಿದರೆ ಹೆಬ್ಬೆರಳು ಗುರುತು ಬಾರದಿದ್ದರೂ ಬಡಜನರಿಗೆ ಅನುಕೂಲವಾಗಲಿದೆಲಕ್ಷ್ಮೀಬಾಯಿ ನಳಗಿರೆ ನೊಂದ ಮಹಿಳೆ ಮೀರಖಲ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.