ADVERTISEMENT

ವಿದ್ಯುತ್ ದರ ಹೆಚ್ಚಳ: ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:57 IST
Last Updated 5 ಏಪ್ರಿಲ್ 2022, 4:57 IST
ಬಿ.ಜಿ. ಶೆಟಕಾರ
ಬಿ.ಜಿ. ಶೆಟಕಾರ   

ದರ ಹೊರೆ ಸರಿಯಲ್ಲ

ಕೈಗಾರಿಕೆಗಳಿಗೆ ಮೊದಲೇ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಬೀದರ್‌ ವಿಭಾಗದಲ್ಲಿ ಗ್ರಾಹಕರಿಗೆ ಅನುಗುಣವಾಗಿ ಜೆಸ್ಕಾಂನಿಂದ ಉತ್ತಮ ಸೇವೆಯೂ ದೊರಕುತ್ತಿಲ್ಲ. ಸಣ್ಣ ಕೈಗಾರಿಕೆಗಳು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ವಿದ್ಯುತ್‌ ದರ ಹೆಚ್ಚಳ ಮಾಡಿರುವುದು ಸರಿಯಲ್ಲ.

ಬಿ.ಜಿ. ಶೆಟಕಾರ್, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ

ADVERTISEMENT

ಸಂಕಷ್ಟಕ್ಕೆ ದೂಡಿದ ಸರ್ಕಾರ

ಕೋವಿಡ್‌ ಕಾರಣಕ್ಕೆ ಎರಡು ವರ್ಷ ಆರ್ಥಿಕ ಸಂಕಷ್ಟ ಎದುರಿಸಿದ ಹೋಟೆಲ್‌ ಉದ್ಯಮ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಬೇಸಿಗೆ ಇರುವ ಕಾರಣ ಹೋಟೆಲ್‌ಗಳಿಗೆ ಹೆಚ್ಚು ಗ್ರಾಹಕರು ಬರುತ್ತಿಲ್ಲ. ವಿದ್ಯುತ್‌ ದರ ಹೆಚ್ಚಳ ಮಾಡುವ ಮೂಲಕ ಸರ್ಕಾರ ಹೋಟೆಲ್‌ ಮಾಲೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಕಿರಣ ಪೇಣೆ, ಶ್ರೀಸಾಯಿ ಟಿಫನ್‌ ಸೆಂಟರ್‌ ಮಾಲೀಕ, ಬೀದರ್

ಉತ್ಪನ್ನಗಳ ಬೆಲೆ ಹೆಚ್ಚಳ

ಕೋವಿಡ್ ಕಾರಣ ದೀರ್ಘ ವ್ಯವಹಾರ ನಡೆದಿಲ್ಲ. ವಿದ್ಯುತ್ ದರ ಹೆಚ್ಚಳ ಮಾಡಿರುವ ಕಾರಣ ನಷ್ಟ ಸರಿದೂಗಿಸಲು ಬೇಕರಿ ಉತ್ಪನ್ನಗಳ ಬೆಲೆ ಹೆಚ್ಚು ಮಾಡಬೇಕಾಗಲಿದೆ. ಬ್ರೆಡ್‌ ಬೆಲೆ ಹೆಚ್ಚಿಸಿದ ನಂತರ ಸಾರ್ವಜನಿಕರು ವಾಗ್ವಾದಕ್ಕೆ ಇಳಿಯುತ್ತಾರೆ. ವಿದ್ಯುತ್‌ ದರ ಹೆಚ್ಚಳದಿಂದ ಆದಾಯವೂ ಕಡಿಮೆಯಾಗಲಿದೆ. ಗ್ರಾಹಕರಿಗೂ ಆರ್ಥಿಕ ಹೊರೆ ಬೀಳಲಿದೆ

ಭೀಮಶಾ, ರಾಘವೇಂದ್ರ ಬೇಕರಿ ಮಾಲೀಕ, ಹುಮನಾಬಾದ್

ಹೊಟ್ಟೆ ಮೇಲೆ ಬರೆ

ವಿದ್ಯುತ್ ದರ ಹೆಚ್ಚಳದಿಂದ ಹೊಟ್ಟೆ ಮೇಲೆ ಬರೆ ಹಾಕಿದಂತಾಗಿದೆ. ಕೋವಿಡ್‌ನಿಂದ ವ್ಯಾಪಾರ ಕಡಿಮೆಯಾಗಿದೆ. ಈ ವರ್ಷ ಸ್ವಲ್ಪ ಚೇತರಿಕೆ ಕಂಡಿದೆ. ಈ ನಡುವೆ ವಿದ್ಯುತ್ ದರ ಏರಿಕೆ ನಮಗೆ ಮತ್ತೆ ಸಮಸ್ಯೆಯಾಗಿದೆ. ದುಬಾರಿ ಬಾಡಿಗೆ ಕೊಟ್ಟು ವ್ಯಾಪಾರ ನಡೆಸುವುದೇ ಕಷ್ಟವಾಗಿದೆ
ಆನಂದ ಜೀರೋಬೆ, ತಂಪು ಪಾನೀಯ ವ್ಯಾಪಾರಿ ಔರಾದ್‌

ಬಡವರಿಗೆ ಹೊರೆ

ಈಗಾಗಲೇ ದಿನಬಳಕೆಯ ವಸ್ತು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಡ, ಮಧ್ಯಮ ವರ್ಗದ ರೈತರು, ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ಈ ನಿರ್ಧಾರ ವಾಪಸ್ ಪಡೆಯಬೇಕು

ಮಲ್ಲಿಕಾರ್ಜುನ ಬಿರಾದಾರ, ರೈತ ಸಂಘದ ಪ್ರಮುಖ, ಭಾಲ್ಕಿ

ಜನರಿಗೆ ಸಂಕಷ್ಟ

ಈಗ ಬೇಸಿಗೆ ಬೇರೆ ಆರಂಭವಾಗಿದೆ. ಏರ್ ಕೂಲರ್ ಹಾಗೂ ಫ್ಯಾನ್ ಬಳಕೆ ಅನಿವಾರ್ಯ. ವಿದ್ಯುತ್ ದರ ಹೆಚ್ಚಳದಿಂದ ಜನಸಾಮಾನ್ಯರಿಗೆ ಬದುಕು ಸಾಗಿಸಲು ತೀರಾ ಸಂಕಷ್ಟ ಆಗಲಿದೆ. ಸರ್ಕಾರ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ವಾಪಸ್‌ ಪಡೆಯಬೇಕು

ಕಲಯ್ಯಾ ಮಠಪತಿ, ಹುಲಸೂರ

ಗಾಯದ ಮೇಲೆ ಬರೆ

ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ನಿದ್ದೆಗೆಡಿಸಿದೆ. ಇದರ ಮಧ್ಯೆ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಮ್ಮದು ಹಿಟ್ಟಿನ ಗಿರಣಿ ಅಂಗಡಿ. ಸದ್ಯ 5 ಕೆ.ಜಿ.ಜೋಳ ಬೀಸಲು ₹ 20 ತೆಗೆದುಕೊಳ್ಳುತ್ತೇವೆ. ಇದಕ್ಕೆ ಗ್ರಾಹಕರು ಚೌಕಾಸಿ ಮಾಡಿ ಕಡಿಮೆ ದುಡ್ಡು ಕೊಟ್ಟು ಹೋಗುತ್ತಾರೆ. ಇದರಿಂದ ದಿನ ಕಿರಿಕಿರಿ ತಪ್ಪಿದಲ್ಲ. ಮುಂದೆ ವಿದ್ಯುತ್ ದರ ಹೆಚ್ಚಳವಾದರೆ ಪ್ರತಿ 5 ಕೆ.ಜಿ.ಗೆ ₹ 30 ತೆಗೆದುಕೊಂಡರೆ ಮಾತ್ರ ನಮಗೆ ಲಾಭವಾಗುವುದು. ಆದರೆ ಗ್ರಾಮೀಣ ಭಾಗದ ಜನರಿಗೆ ಇದರ ತಿಳಿಹೇಳುವುದು ತುಂಬಾ ಕಷ್ಟವಾಗಿದೆ. ವಿದ್ಯುತ್ ದರ ಹೆಚ್ಚಳ ಚಿಂತೆಗೀಡು ಮಾಡಿದೆ

ಕವಿತಾ ಕೆನಾಡೆ, ಹಿಟ್ಟಿನ ಗಿರಣಿ ಅಂಗಡಿ ಯಜಮಾನಿ

ವ್ಯವಹಾರಕ್ಕೆ ತೊಂದರೆ

ವಿದ್ಯುತ್ ದರ ಹೆಚ್ಚಿದ್ದರಿಂದ ಫೋಟೊಗ್ರಾಫಿಗೆ ಸಂಬಂಧಿಸಿದ ವ್ಯಾಪಾರ, ಉದ್ಯಮಕ್ಕೆ ತೊಂದರೆ ಆಗಲಿದೆ. ಮೊಬೈಲ್‌ಗಳು ಬಂದ ನಂತರ ಫೋಟೊಗ್ರಾಫರ್‌ಗಳನ್ನು ಯಾರೂ ಕೇಳದಂತಾಗಿದೆ. ಅಲ್ಲದೆ ಕ್ಯಾಮೆರಾಗಳ ದರವೂ ಹೆಚ್ಚಿದೆ. ಇಂಥದರಲ್ಲಿ ವಿದ್ಯುತ್ ದರ ಹೆಚ್ಚಿಸಿದರೆ ಇನ್ನಷ್ಟು ತೊಂದರೆ ಆಗಲಿದೆ. ಆದ್ದರಿಂದ ವಿದ್ಯುತ್ ದರ ಹೆಚ್ಚಿಸುವುದು ಸೂಕ್ತ ಕ್ರಮವಲ್ಲ

ರೂಪೇಶ ಗೊಂಟಲ್, ಫೋಟೊ ಲ್ಯಾಬ್ ಮಾಲೀಕ, ಬಸವಕಲ್ಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.