ADVERTISEMENT

ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ

'ಡಾ.ಅಂಬೇಡ್ಕರ್ ಓದು' ಕಾರ್ಯಕ್ರಮದಲ್ಲಿ ಮಾಸಿಮಾಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 9:31 IST
Last Updated 18 ಅಕ್ಟೋಬರ್ 2019, 9:31 IST
ಬೀದರ್‌ನ ಬಿವಿಬಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 'ಡಾ.ಬಿ.ಆರ್‌.ಅಂಬೇಡ್ಕರ್‌ ಓದು ಕಾರ್ಯಕ್ರಮ'ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸಸಿಗೆ ನೀರು ಹಾಕಿದರು. ಶ್ರೀಲತಾ, ಎಸ್‌.ಕೆ. ಸಾತನೂರ, ಮಲ್ಲಿಕಾರ್ಜುನ ಕನಕಟ್ಟೆ, ಸಿದ್ರಾಮಪ್ಪ ಮಾಸಿಮಾಡೆ ಇದ್ದಾರೆ
ಬೀದರ್‌ನ ಬಿವಿಬಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 'ಡಾ.ಬಿ.ಆರ್‌.ಅಂಬೇಡ್ಕರ್‌ ಓದು ಕಾರ್ಯಕ್ರಮ'ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸಸಿಗೆ ನೀರು ಹಾಕಿದರು. ಶ್ರೀಲತಾ, ಎಸ್‌.ಕೆ. ಸಾತನೂರ, ಮಲ್ಲಿಕಾರ್ಜುನ ಕನಕಟ್ಟೆ, ಸಿದ್ರಾಮಪ್ಪ ಮಾಸಿಮಾಡೆ ಇದ್ದಾರೆ   

ಬೀದರ್‌: ‘ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎನ್ನುವ ಮನೋಭಾವವನ್ನು ಡಾ.ಅಂಬೇಡ್ಕರ್‌ ಹೊಂದಿದ್ದರು’ ಎಂದು ಬಿವಿಬಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.

ನಗರದ ಬಿವಿಬಿ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ನಾನು ಸಮಾಜದಿಂದ ಏನನ್ನು ಪಡೆದುಕೊಂಡಿದ್ದೇನೆಯೋ ಅದಕ್ಕಿಂತ ನೂರು ಪಟ್ಟು ಸಮಾಜಕ್ಕೆ ಏನಾದರೂ ಕೊಡುಗೆಯಾಗಿ ನೀಡಬೇಕು ಎನ್ನುವ ವಿಚಾರ ಅವರದಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಅಂಬೇಡ್ಕರ್‌ ಅವರು 15 ಕೃತಿಗಳನ್ನು ರಚಿಸುವ ಜತೆಗೆ ಹತ್ತು ಸಂಘ ಸಂಸ್ಥೆಗಳನ್ನೂ ಸ್ಥಾಪಿಸಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕು ನಡೆಸಿದ್ದರು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ‘ಡಾ.ಅಂಬೇಡ್ಕರ್‌ ಅವರ ಜೀವನ ಶೈಲಿ, ಬರಹ ಹಾಗೂ ಭಾಷಣಗಳು ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಿವೆ’ ಎಂದು ನುಡಿದರು.

ನ್ಯಾಷನಲ್‌ ಪ್ರೌಢಶಾಲೆಯ ಪ್ರಾಚಾರ್ಯೆ ಶ್ರೀಲತಾ ಮಾತನಾಡಿ,‘ ವಿಶ್ವಸಂಸ್ಥೆಯು ಡಾ.ಅಂಬೇಡ್ಕರ್ ಅವರ ಪ್ರತಿಭೆಯನ್ನು ಗುರುತಿಸಿ ವಿಶ್ವ ಜ್ಞಾನದಿವಸವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಅಲ್ಲದೇ ವಿಶ್ವವಿದ್ಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಅಧ್ಯಯನ ಪೀಠಗಳನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಹೇಳಿದರು.

ಮಲ್ಲಿಕಾರ್ಜುನ ಕನಕಟ್ಟೆ ಮಾತನಾಡಿದರು. ಬಿವಿಬಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಕೆ.ಸಾತನೂರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಅಂಬೇಡ್ಕರ್‌ ಹಾಗೂ ಬಸವಣ್ಣನವರ ಕುರಿತು ಹಾಡುಗಳನ್ನು ಹಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆ ಕುರಿತು ಆಯೋಜಿಸಿದ್ದ ರಸಪ್ರಶ್ನೆ, ಕವನವಾಚನ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.

ಪ್ರೊ.ಹಣಮಂತಪ್ಪ ಸೇಡಂಕರ್‌ ಸ್ವಾಗತಿಸಿದರು. ಪ್ರೊ.ಶೈಲಜಾ ಚಂದ್ರಶೇಖರ ನಿರೂಪಿಸಿದರು. ಪ್ರೊ.ವಾಮನರಾವ್‌ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.