
ಬಸವಕಲ್ಯಾಣ: ‘ವ್ಯಕ್ತಿತ್ವ ಮತ್ತು ಗುಣದೋಷಗಳ ಬಗ್ಗೆ ನೆರೆಮನೆಯವರ ಪ್ರಮಾಣಪತ್ರ ಮುಖ್ಯವಾಗುತ್ತದೆ. ಹೊರತು ದೂರದ ಅವರಿವರಿಂದ ಹೊಗಳಿಸಿಕೊಂಡರೆ ಯಾರೂ ಉತ್ತಮ ಆಗುವುದಿಲ್ಲ’ ಎಂದು ಮಂಗಳೂರಿನ ಪ್ರವಚನಕಾರ ಮುಹಮ್ಮದ್ ಕುಂಞ ಹೇಳಿದರು.
ನಗರದ ತೇರು ಮೈದಾನದ ಸಭಾ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕುರಾನ್ ಕನ್ನಡ ಪ್ರವಚನದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ನೆರೆಮನೆಯವರೊಂದಿಗೆ ಪ್ರೀತಿ, ವಿಶ್ವಾಸದಿಂದ ವರ್ತಿಸಿ ಗೌರವಿಸಿದರೆ ಅವರು ದೇವ ವಿಶ್ವಾಸಿ ಆಗುತ್ತಾರೆ. ಇಲ್ಲವೆ ನರಕಕ್ಕೆ ಹೋಗುತ್ತಾರೆ ಎಂದು ಕುರ್‌ಆನ್ ಹೇಳುತ್ತದೆ. ಯಾರೂ ಅಪನಂಬಿಕೆಗೆ ಗುರಿಯಾಗುವಂತೆ ವ್ಯವಹರಿಸಬಾರದು. ಗಲಭೆ, ಕತ್ತುಕೊಯ್ಯುವುದಕ್ಕೆ ಪ್ರಚೋದಿಸಬಾರದು. ಭಯದ ವಾತಾವರಣ ಸೃಷ್ಟಿಸಬಾರದು. ಪ್ರೀತಿ, ಸಾಮರಸ್ಯ, ಸೌಹಾರ್ದದ ನಾಡಾಗಿಸಲು ಎಲ್ಲರೂ ಪ್ರಯತ್ನಿಸಬೇಕು. ರಚನಾತ್ಮಕ ಕೆಲಸ ಕೈಗೊಳ್ಳಬೇಕು. ಕರ್‌ಆನ್ ಅಷ್ಟೇ ಅಲ್ಲ, ಭಗವದ್ಗೀತೆ, ಬೈಬಲ್, ಬಸವಾದಿ ಶರಣರ ವಚನಗಳ ಪ್ರವಚನ ನಿತ್ಯವೂ ನಡೆಯಬೇಕು. ಆರೋಗ್ಯವಂತ ಸಮಾಜಕ್ಕೆ ಇದೆಲ್ಲ ಅವಶ್ಯಕ’ ಎಂದರು.
‘ಕೌಟುಂಬಿಕ ಸಂಬಂಧ ಹದಗೆಡುತ್ತಿದೆ. ದಾಂಪತ್ಯ ಸರಿ ಇದ್ದರೆ ಮಕ್ಕಳೂ ಉತ್ತಮ ನಡತೆಯವರು ಆಗುತ್ತಾರೆ. ತಂದೆ–ತಾಯಿ ಕಣ್ಣೀರು ಹಾಕುವುದು ಮಕ್ಕಳಿಗೆ ತಟ್ಟುವ ದೊಡ್ಡ ಶಾಪ. ಪಾಲಕರನ್ನು ದೂಷಿಸುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಆಧುನಿಕ ತಂತ್ರಜ್ಞಾನ ಸಂಬಂಧಗಳನ್ನು ಹಾಳು ಮಾಡುತ್ತಿದೆ. ವೈಫ್ ಇಲ್ಲದೆ ಬದುಕಬಹುದು ಆದರೆ, ವೈಫೈ ಇಲ್ಲದೆ ಜೀವಿಸಲಾಗದು ಎಂಬಂಥ ವಾತಾವರಣವಿದೆ’ ಎಂದು ಹೇಳಿದರು.
ಅಣದೂರ ಭಂತೆ ವರಜ್ಯೋತಿ ಮಾತನಾಡಿ,‘ಎಲ್ಲ ಧರ್ಮ ಗ್ರಂಥಗಳು ಮತ್ತು ವಚನಗಳು ಮಾನವೀಯ ಮೌಲ್ಯಗಳನ್ನೇ ಸಾರುತ್ತವೆ. ಮೊದಲು ಮಾನವನಾಗು ಎಂದು ಸಲಹೆ ನೀಡುತ್ತವೆ’ ಎಂದರು.
ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ನೀರಾವರಿ ಇಲಾಖೆ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಯುಸೂಫೊದ್ದೀನ್ ನಿಲಂಗೇಕರ್, ಹಾಪೀಜ್ ಇಫ್ತೇಕಾರ್, ಅಹ್ಮದಸಾಬ್ ಕಾಜ್ಮಿ ಮಾತನಾಡಿದರು. ನಿರ್ಗುಡಿ ಮಲ್ಲಿನಾಥ ಮಹಾರಾಜ, ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಸ್ಲಂ ಜನಾಬ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.