ಬೀದರ್: ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.
ಬಳಿಕ ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಆನಂತರ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಬಳಿಕ ಮಾತನಾಡಿದ ಸಚಿವ ಈಶ್ವರ ಬಿ. ಖಂಡ್ರೆ, ಅಸಂಖ್ಯ ಜನರ ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕಳೆದ 77 ವರ್ಷಗಳಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಹೇಳಿದರು.
140 ಕೋಟಿ ಜನಸಂಖ್ಯೆ ಪೈಕಿ 110 ಕೋಟಿ ಜನರ ಬಳಿ ಮೊಬೈಲ್‌ಗಳಿದ್ದು, ಅಂಗೈನಲ್ಲೇ ಎಲ್ಲ ಮಾಹಿತಿ ಲಭ್ಯವಾಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಹೊಂದಿದ್ದೇವೆ. ಭಾರತ ಜಗತ್ತಿನಲ್ಲಿ ಬಲಾಢ್ಯ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ, ಸಂಸದ ಸಾಗರ ಖಂಡ್ರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಆಯುಕ್ತ ಮುಕುಲ್ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.