ADVERTISEMENT

ಭಾಲ್ಕಿ | ಪಾಲನೆಯಾಗದ ಸಂಚಾರ ನಿಯಮ; ಜೀವಕ್ಕೆ ಕುತ್ತು: 3 ವರ್ಷಗಳಲ್ಲಿ 120 ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:00 IST
Last Updated 22 ಜನವರಿ 2026, 5:00 IST
ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದ ಬಳಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಸಂಚಾರ ನಿಯಮಗಳ ಜಾಗೃತಿ ಎಲ್ ಇಡಿ ಸೂಚನಾ ಫಲಕ
ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದ ಬಳಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಸಂಚಾರ ನಿಯಮಗಳ ಜಾಗೃತಿ ಎಲ್ ಇಡಿ ಸೂಚನಾ ಫಲಕ   

ಭಾಲ್ಕಿ: ದ್ವಿಚಕ್ರ ವಾಹನ ಸವಾರರು, ವಾಹನ ಚಾಲಕರಿಂದ ಸರಿಯಾಗಿ ಸಂಚಾರ ನಿಯಮಗಳ ಪಾಲನೆ ಆಗಿಲ್ಲದೆ ಇರುವುದರಿಂದ ಭಾಲ್ಕಿ ಗ್ರಾಮೀಣ ವೃತ್ತ ನಿರೀಕ್ಷಕರ ಕಚೇರಿಯ ವ್ಯಾಪ್ತಿಯ ವಿವಿಧೆಡೆ ನಡೆದ ಅಪಘಾತಗಳಲ್ಲಿ ಮೂರು ವರ್ಷಗಳಲ್ಲಿ ಸುಮಾರು 120 ಜನರು ಮೃತಪಟ್ಟಿದ್ದು, 300 ಜನರು ಗಾಯಗೊಂಡಿದ್ದಾರೆ.

ಜ.16ರಂದು ತಾಲ್ಲೂಕಿನ ಖಾನಾಪುರ ಬಳಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹೊನ್ನಿಕೇರಿ ಗ್ರಾಮದ ಅತೀಶ ಅಮೃತ್ (37) ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರಲ್ಲಿ ಬಹುತೇಕರು ದ್ವಿಚಕ್ರ ವಾಹನ ಸವಾರರು, ಹಿಂಬದಿ ಸವಾರರು. ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ಇರುವುದು, ವೇಗದ ಚಾಲನೆ, ಸಂಚಾರ ನಿಯಮಗಳ ಪಾಲನೆ ಆಗದಿರುವುದು ಅಪಘಾತಗಳು ಸಂಭವಿಸಲು, ಅಪಘಾತಗಳಲ್ಲಿ ಮೃತಪಡಲು ಬಹುಮುಖ್ಯ ಕಾರಣಗಳಾಗಿವೆ.

‘ನಮ್ಮ ಗ್ರಾಮೀಣ ವೃತ್ತ ನಿರೀಕ್ಷಕರ ಕಚೇರಿಯ ವ್ಯಾಪ್ತಿಯ ವಿವಿಧೆಡೆ ನಡೆದ ಅಪಘಾತಗಳಲ್ಲಿ 2023ರಿಂದ 2025ರವರೆಗೆ ವಾರ್ಷಿಕ ಕ್ರಮವಾಗಿ 41, 39, 40 ಜನರು ಮೃತಪಟ್ಟಿದ್ದು, ಪ್ರತಿವರ್ಷ ಸುಮಾರು 100 ಜನರು ಅಪಘಾತಗಳಲ್ಲಿ ಗಾಯಗೊಂಡು ಕೈ, ಕಾಲು ಕಳೆದುಕೊಂಡಿದ್ದಾರೆ. ತಾಲ್ಲೂಕಿನ ಸೇವಾನಗರ ಸಮೀಪದ ರಸ್ತೆ, ಬ್ಯಾಲಹಳ್ಳಿ ರಸ್ತೆ, ಭಾತಂಬ್ರಾ ಗ್ರಾಮ ಸಮೀಪದ ರಸ್ತೆಗಳನ್ನು ಅಪಘಾತ ವಲಯಗಳನ್ನಾಗಿ ಗುರುತಿಸಲಾಗಿದೆ’ ಎಂದು ಗ್ರಾಮೀಣ ವೃತ್ತ ನಿರೀಕ್ಷಕ ಹನುಮರೆಡ್ಡಿ 'ಪ್ರಜಾವಾಣಿ' ಗೆ ಮಾಹಿತಿ ನೀಡಿದರು.

ADVERTISEMENT

ಅಪಘಾತಗಳಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಜೀವನ ಪರ್ಯಂತ ಅಂಗವೈಕಲ್ಯದಿಂದ ಹಾಸಿಗೆ ಹಿಡಿಯುವ ಸ್ಥಿತಿಯಲ್ಲಿಯೂ ಇರುವಂತಹ ಸ್ಥಿತಿ ಕಂಡಿದ್ದೇವೆ ಎನ್ನುತ್ತಾರೆ ಪೊಲೀಸರು. ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ನಿರಂತರವಾಗಿ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಪಘಾತಗಳ ತಡೆಗೆ ಅಗತ್ಯ ಎಲ್ಲ ರೀತಿ ಕ್ರಮ ಜಾರಿಗೊಳಿಸಲಾಗಿದೆ. ದುರ್ಘಟನೆಗಳು ನಡೆಯದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಸಾರ್ವಜನಿಕರು ತಪ್ಪದೇ ಸಂಚಾರ ನಿಯಮ ಪಾಲಿಸಬೇಕು. ವಿಶೇಷವಾಗಿ ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಸಂಚರಿಸಬೇಕು ಎನ್ನುತ್ತಾರೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ.

ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದ ಬಳಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಸಂಚಾರ ನಿಯಮಗಳ ಜಾಗೃತಿ ಎಲ್ ಇಡಿ ಸೂಚನಾ ಫಲಕ
ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದ ಬಳಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಸಂಚಾರ ನಿಯಮಗಳ ಜಾಗೃತಿ ಎಲ್ ಇಡಿ ಸೂಚನಾ ಫಲಕ
ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕಾಗಿ ಎನ್‌ಎಚ್‌ಎ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಸ್ಥಳಗಳಲ್ಲಿ ರಬ್ಬರ್ ಹಂಪ್ಸ್ ಕ್ಯಾಟಲಾಗ್ ಶೈನಿಂಗ್ ಲೈಟ್ಸ್ ಸೂಚನಾ ಫಲಕಗಳನ್ನು ಅಳವಡಿಸಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ
ಹನುಮರೆಡ್ಡಿ ಗ್ರಾಮೀಣ ವೃತ್ತ ನಿರೀಕ್ಷಕರು ಭಾಲ್ಕಿ
ದ್ವಿಚಕ್ರ ವಾಹನ ಸವಾರರು ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.
ಬಿ.ಅಮರೇಶ್ ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.