ADVERTISEMENT

ರಸ್ತೆ ಅಪಘಾತ: ವರ್ಷಕ್ಕೆ 1.5 ಲಕ್ಷ ಜನರ ಸಾವು

ಡಿವೈಎಸ್‌ಪಿ ಗೋಪಾಲ್ ಬ್ಯಾಕೋಡ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:51 IST
Last Updated 22 ಫೆಬ್ರುವರಿ 2021, 5:51 IST
ಬೀದರ್‌ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಉಚಿತ ವಿತರಿಸಲಾಯಿತು
ಬೀದರ್‌ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಉಚಿತ ವಿತರಿಸಲಾಯಿತು   

ಬೀದರ್: ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 1.5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ತಿಳಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರ ಪೊಲೀಸ್ ಠಾಣೆ, ಪ್ರದೇಶಿಕ ಸಾರಿಗೆ ಅಧಿಕಾರಿ ಕಚೇರಿ, ರೆಡ್ ಕ್ರಾಸ್ ಸಂಸ್ಥೆ, ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಸ್ತೆ ಅಪಘಾತಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಶೀಟ್ ಬೆಲ್ಟ್ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಮಾತನಾಡಿ, ವಾಹನಗಳು ಪರಸ್ಪರ 100 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ವೃತ್ತ, ತಿರುವು, ಇಳಿಜಾರು ರಸ್ತೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಹೇಳಿದರು.

ಸಂಚಾರ ಸಿಪಿಐ ವಿಜಯಕುಮಾರ ಬಿರಾದಾರ ಮಾತನಾಡಿ, ಬೀದರ್ ನಗರದಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ 40 ಜನ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದ್ದರೆ ಶೇ 50 ರಷ್ಟು ಜನರ ಪ್ರಾಣ ಉಳಿಯಬಹುದಿತ್ತು ಎಂದು ತಿಳಿಸಿದರು.

ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದಾರ್ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಉಚಿತವಾಗಿ ವಿತರಿಸಿದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಪ್ರಭಾ ಅಧ್ಯಕ್ಷತೆ ವಹಿಸಿದ್ದರು. ಮೋಟಾರ್ ಇನ್‍ಸ್ಪೆಕ್ಟರ್ ಎಚ್.ಎಸ್. ಪ್ರಸನ್ನ, ಸಂಚಾರ ಠಾಣೆ ಪಿಎಸ್‍ಐ ಬಾವಿಮನಿ, ಎಸ್. ಶಿವಪ್ಪ ಮೇಟಿ, ಲಕ್ಷ್ಮಣ ಕಾಂಬಳೆ, ಗಿರಿಜಾ ಮಂಗಳಗಟ್ಟಿ ಉಪಸ್ಥಿತರಿದ್ದರು.

ಡಾ. ಶರಣಪ್ಪ ಮಲಗೊಂಡ ಸ್ವಾಗತಿಸಿದರು. ರಾಜಕುಮಾರ ಅಲ್ಲೂರೆ ನಿರೂಪಿಸಿದರು. ನಾಗಮ್ಮ ಭಂಗರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.