ADVERTISEMENT

ಭ್ರಷ್ಟಾಚಾರದ ಕಾರಣ ರಸ್ತೆ ಕೆಲಸ ಕಳಪೆ: ಆನಂದ ದೇವಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 12:25 IST
Last Updated 2 ಡಿಸೆಂಬರ್ 2022, 12:25 IST
ಆನಂದ ದೇವಪ್ಪ
ಆನಂದ ದೇವಪ್ಪ   

ಬಸವಕಲ್ಯಾಣ: ‘ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕೈಯಿಂದ ತೆಗೆದರೆ ಡಾಂಬರು ಕಿತ್ತುತ್ತಿದೆ. ಹೀಗಾಗಿ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೆ ಮತ್ತೆ ತೊಂದರೆ ಆಗುತ್ತಿದೆ’ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ದೂರಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಾನು ಉಜಳಂಬ-ಮಳಗಿ ಹಾಗೂ ಇತರ ರಸ್ತೆಗಳಿಗೆ ಹೋಗಿ ನೋಡಿದ್ದೇನೆ. ಡಾಂಬರಿನ ಪದರು ಬಾಳೆ ಹಣ್ಣಿಯ ಸಿಪ್ಪೆ ಸುಲಿದಂತೆ ಕೈಯಿಂದ ಹಿಡಿದು ಮೇಲಕ್ಕೆ ಎತ್ತಬಹುದಾಗಿದೆ. ಸಸ್ತಾಪುರ-ಇಲ್ಲಾಳ ರಸ್ತೆ, ಹುಲಸೂರ- ಕೋಟಮಾಳ ರಸ್ತೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅನ್ಯ ಜಿಲ್ಲೆಯವರಿಗೆ ಟೆಂಡರ್ ನೀಡಿದ್ದು ಹಾಗೂ ಅಧಿಕಾರಿಗಳು ಮತ್ತು ಶಾಸಕರು ಶೇ 50 ರಷ್ಟು ಪರ್ಸೆಂಟೇಜ್ ಪಡೆಯುತ್ತಿರುವ ಕಾರಣ ಹೀಗಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು, ಬಿಜೆಪಿಯ ಘಟಾನುಘಟಿ ಮುಖಂಡರು ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದು ಸಾವಿರಾರು ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರಾದರೂ ಅದು ಈಡೇರಿಲ್ಲ. ಶಾಸಕರು ಸಹ ಈ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ. ಇದುವರೆಗೆ ಬರೀ ₹91 ಕೋಟಿ ಅನುದಾನ ಬಂದಿರುವ ಬಗ್ಗೆ ಹಾಗೂ ಈ ತಾಲ್ಲೂಕು ಅಭಿವೃದ್ಧಿ ವಿಷಯದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ’ ಎಂದರು.

ADVERTISEMENT

‘ತಾಲ್ಲೂಕಿನ ಶೇ 90ರಷ್ಟು ರೈತರಿಗೆ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಇಂಥದರಲ್ಲಿ ಶಾಸಕರು ಸಕ್ಕರೆ ಕಾರ್ಖಾನೆ ಹಾಗೂ ಸೋಯಾಬಿನ್ ಸಂಸ್ಕರಣಾ ಘಟಕ ಸ್ಥಾಪಿಸುತ್ತೇನೆ ಎಂದು ಮತ್ತೆ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.