ADVERTISEMENT

ಬೀದರ್: ಸಂಚಾರಕ್ಕೆ ಅಡ್ಡಿಯಾದ ರಸ್ತೆ ಮೇಲಿನ ಕಟ್ಟೆಗಳು!

ಅನಧಿಕೃತ ಕಟ್ಟಡಗಳಿಂದ ವಾಹನ ಸವಾರರಿಗೆ ಕಿರಿಕಿರಿ, ಅ‍ಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು

ಚಂದ್ರಕಾಂತ ಮಸಾನಿ
Published 22 ಮಾರ್ಚ್ 2021, 3:37 IST
Last Updated 22 ಮಾರ್ಚ್ 2021, 3:37 IST
ಹುಲಸೂರಲ್ಲಿ ಒಂದೇ ರಸ್ತೆಯಲ್ಲಿ ಸರತಿ ಸಾಲಿನಂತೆ ಮೂರು ಪ್ರತಿಮೆ ಹಾಗೂ ಧ್ವಜಕಟ್ಟೆಗಳು ಇದೆ
ಹುಲಸೂರಲ್ಲಿ ಒಂದೇ ರಸ್ತೆಯಲ್ಲಿ ಸರತಿ ಸಾಲಿನಂತೆ ಮೂರು ಪ್ರತಿಮೆ ಹಾಗೂ ಧ್ವಜಕಟ್ಟೆಗಳು ಇದೆ   

ಬೀದರ್: ರಸ್ತೆ ಮಧ್ಯೆ ಇರುವ ಅನಧಿಕೃತ ಕಟ್ಟಡ, ಪ್ರತಿಮೆಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್‌ ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ಸರ್ಕಾರ ಜಿಲ್ಲಾಡಳಿತಕ್ಕೆ ಸುತ್ತೋಲೆ ಕಳಿಸಿಕೊಟ್ಟು ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನೂ ನೀಡಿದೆ. ಆದರೆ, ಜಿಲ್ಲಾಡಳಿತ ಹೆದ್ದಾರಿಗಳಲ್ಲಿರುವ ಪ್ರತಿಮೆಗಳನ್ನು ತೆರವುಗೊಳಿಸಲು ಇನ್ನೂ ಹಿಂದೇಟು ಹಾಕುತ್ತಿದೆ.

ರಾತ್ರೋರಾತ್ರಿ ಅನೇಕ ಗ್ರಾಮಗಳ ಅಗಸಿಗಳಲ್ಲೇ ಹೆದ್ದಾರಿ ಮೇಲೆ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಸಮುದಾಯಕ್ಕೆ ಸೇರಿದ ಮಹನೀಯರ ಪ್ರತಿಮೆಗಳು ರಸ್ತೆ ಮಧ್ಯೆ ಇವೆ. ಇವು ವಾಹನ ಚಾಲಕರಿಗೆ ಅಪಾಯ ತಂದೊಡ್ಡಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.

ನಾಲ್ಕು ವರ್ಷಗಳ ಹಿಂದೆ ಬೀದರ್‌ನ ಸಂಚಾರ ದಟ್ಟಣೆ ವೃತ್ತವೊಂದರಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಜಂಟಿಯಾಗಿ ಮೂರ್ತಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿ ದೊಡ್ಡದಾದ ಪ್ರತಿಮೆಯನ್ನೂ ನಿರ್ಮಿಸಲಾಗಿದೆ. ಆ ವೃತ್ತದಲ್ಲಿ ದೊಡ್ಡ ವಾಹನಗಳು ತಿರುಗಿ ಹೋಗುವಾಗ ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ ನಿದರ್ಶನಗಳಿವೆ.

ADVERTISEMENT

ಔರಾದ್‌ ತಾಲ್ಲೂಕಿನ ಬೋರಾಳ್‌ ಸಮೀಪ ರಾಷ್ಟ್ರೀಯ ಹೆದ್ದಾರಿ ನಡುವೆಯೇ ಪ್ರತಿಮೆ ಸ್ಥಾಪನೆಗೆ ದೊಡ್ಡದಾದ ಕಟ್ಟೆಯೊಂದನ್ನು ನಿರ್ಮಿಸಲಾಗಿದೆ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಬೀದರ್‌ನ ಗುರುದ್ವಾರ ದರ್ಶನಕ್ಕೆ ಬರುತ್ತಿದ್ದವರ ಕಾರು ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದರು.

ಕಂದಗೂಳ ಗ್ರಾಮದ ಸಮೀಪ ಎರಡು ಸಿಮೆಂಟ್‌ ಪೈಪ್‌ಗಳನ್ನು ನಿಲ್ಲಿಸಿ ದೇವರ ಭಾವಚಿತ್ರ ಅಂಟಿಸಲಾಗಿದೆ. ಇದು ಬಸ್‌ಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಸಂಚಾರ ನಿಯಮಗಳ ಅರಿವು ಇಲ್ಲದ ಕಾರಣ ಗ್ರಾಮಸ್ಥರು ತಮ್ಮ ಗ್ರಾಮಗಳ ಪ್ರವೇಶದಲ್ಲಿ ಇಂತಹ ಪೈಪ್‌ಗಳನ್ನು ನಿಲ್ಲಿಸಿದ್ದಾರೆ.

ಜಿಲ್ಲೆಯಲ್ಲಿರುವ ವೃತ್ತಗಳಿಗೆ ನಿರ್ದಿಷ್ಟ ವ್ಯಾಸ ಇಲ್ಲ. ಬೃಹದಾಕಾರದಲ್ಲಿ ವೃತ್ತಗಳನ್ನು ನಿರ್ಮಿಸಿ ವಾಹನಗಳು ಸುಲಭವಾಗಿ ಸಂಚರಿಸದಂತೆ ಮಾಡಲಾಗಿದೆ. ಬೀದರ್, ಭಾಲ್ಕಿ, ಬಸವಕಲ್ಯಾಣದಲ್ಲಿ ಇಂತಹ ವೃತ್ತಗಳು ಅಧಿಕ ಸಂಖ್ಯೆಯಲ್ಲಿವೆ. ಡಾ.ಅಂಬೇಡ್ಕರ್‌, ಬಸವೇಶ್ವರ, ಬೊಮ್ಮಗೊಂಡೇಶ್ವರ, ಅಕ್ಕಮಹಾದೇವಿ, ಸುಭಾಷಚಂದ್ರ ಬೋಸ್, ಮಹಾತ್ಮಾ ಗಾಂಧಿ ವೃತ್ತ ಹಾಗೂ ಧಾರ್ಮಿಕ ಚಿಹ್ನೆಗಳಿರುವ ದೊಡ್ಡದಾದ ಕಟ್ಟೆಗಳು ನಡು ರಸ್ತೆಯಲ್ಲೇ ಇವೆ.

ಬೀದರ್‌ ತಾಲ್ಲೂಕಿನ ಜನವಾಡ, ಕಮಠಾಣದಲ್ಲಿ ಹೆದ್ದಾರಿ ಮಧ್ಯೆಯೇ ಪ್ರತಿಮೆಗಳು ಇವೆ. ಭಾಲ್ಕಿ ತಾಲ್ಲೂಕಿನ ದಾಡಗಿ, ಖಟಕಚಿಂಚೋಳಿ, ಡಾವರಗಾಂವದಲ್ಲೂ ಪ್ರತಿಮೆಗಳು ರಸ್ತೆ ನಡುವೆಯೇ ಇವೆ.

ಲಾತೂರ್‌–ಭಾಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಲಸೂರು ಬಳಿ ಬಸವೇಶ್ವರ, ಮಹಾತ್ಮ ಗಾಂಧಿ, ಬೊಮ್ಮಗೊಂಡೇಶ್ವರ, ನಂದಿ ಬಸವಣ್ಣನ ಕಟ್ಟೆ ಇವೆ. ಹುಲಸೂರಲ್ಲಿ ಪ್ರತಿಮೆಗಳು ಅಷ್ಟೇ ಅಲ್ಲ, ಅದರ ಮುಂದೆ ಧ್ವಜಕಟ್ಟೆಗಳನ್ನೂ ನಿರ್ಮಿಸಲಾಗಿದೆ.

ಕಮಲನಗರ ತಾಲ್ಲೂಕಿನ ಹೆದ್ದಾರಿ ಮಧ್ಯೆ ಒಂದು ಬಸವಣ್ಣನ ಪ್ರತಿಮೆ ಇತ್ತು. ವಾರದಲ್ಲಿ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿತ್ತು.

ಗ್ರಾಮಸ್ಥರ ಮನವೊಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದನ್ನು ತೆರವುಗೊಳಿಸಿದ ನಂತರ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಹುಲಸೂರಲ್ಲಿ ಬೊಮ್ಮಗೊಂಡೇಶ್ವರ, ಮಹಾತ್ಮ ಗಾಂಧಿ ಪ್ರತಿಮೆ ಹಾಗೂ ಧ್ವಜಕಟ್ಟೆ ಒಂದೇ ಸಾಲಿನಲ್ಲಿ ಇವೆ. ಹಿಂದೆ ಅಧಿಕಾರಿಗಳೇ ಇವುಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪಗಳಿವೆ.. ಹುಲಸೂರಲ್ಲಿ ಊರು ತುಂಬ ರಸ್ತೆ ಮಧ್ಯದಲ್ಲಿ ಧಾರ್ಮಿಕ ಕಟ್ಟಡಗಳೇ ತಲೆ ಎತ್ತಿವೆ. ಕೆಲವರು ಕಾನೂನು ಗಳನ್ನು ಗಾಳಿಗೆ ತೂರಿ ಕಟ್ಟಡ ಕಟ್ಟಿದರೂ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ.

ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಹಾಗೂ ಅಪಘಾತಗಳು ಸಂಭವಿಸುತ್ತಿರುವ ಕಾರಣ ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅವರು ತಕ್ಷಣ ಅನಧಿಕೃತ ಕಟ್ಟೆ, ಪ್ರತಿಮೆಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು.

ಪಿಡಿಒಗಳಿಗೂ ಸೂಚನೆ ನೀಡಿದ್ದರು. ಈಗಿನ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರೂ ಹೆದ್ದಾರಿ ಮಧ್ಯದ ಪ್ರತಿಮೆಗಳ ತೆರವಿಗೆ ಆದೇಶ ನೀಡಿದ್ದಾರೆ. ಕೆಲ ಸಮುದಾಯದ ವಿರೋಧವನ್ನು ಎದುರಿಸಲಾಗದೆ ಪಿಡಿಒಗಳು ಮೌನಕ್ಕೆ ಜಾರಿದ್ದಾರೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಧೈರ್ಯ ಮಾಡುತ್ತಿಲ್ಲ

‘ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ತಮ್ಮ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅವರ ಬೆನ್ನಿಗೆ ಯಾರೂ ನಿಲ್ಲುತ್ತಿಲ್ಲ. ಜನರ ಜೀವಕ್ಕಿಂತ ಪ್ರತಿಮೆಗಳಿಗೇ ಮಹತ್ವ ಕೊಡಲಾಗುತ್ತಿದೆ. ಮಹಾಪುರುಷರು ನಮಗೆ ಬೇಕು. ಆದರೆ ಅವರ ಮೂರ್ತಿ ರಸ್ತೆ ನಡುವೆ ನಿಲ್ಲಿಸುವುದು ಗೌರವ ತರುವ ವಿಷಯ ಅಲ್ಲ. ಊರಲ್ಲಿ ಸುಸಜ್ಜಿತವಾದ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿ ಗೌರವ ಕೊಡೋಣ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

‘ನಾನು ವೃತ್ತಗಳಲ್ಲಿನ ನಿರ್ಧಿಷ್ಟ ಪ್ರತಿಮೆಗಳ ಬಗ್ಗೆ ಮಾತನಾಡಲಾರೆ. ಆದರೆ, ರಸ್ತೆ ಮಧ್ಯದಲ್ಲಿಯೇ ಕೆಲ ಕಡೆ ಪ್ರತಿಮೆಗಳನ್ನು ನಿರ್ಮಿಸಿರುವ ಪ್ರತಿಮೆಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳನ್ನು ತೆರವುಗೊಳಿಸಬೇಕು. ಸುಗಮ ಸಂಚಾರಕ್ಕೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಸೋನಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.