ADVERTISEMENT

ಉತ್ತರ ಕರ್ನಾಟಕಕ್ಕೆ ₹50 ಸಾವಿರ ಕೋಟಿ ಕೊಡಿ

ವಾಟಾಳ್‌‌ ಪಕ್ಷದ ಸಂಸ್ಥಾಪಕ ವಾಟಾಳ್‌ ನಾಗರಾಜ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 17:14 IST
Last Updated 26 ಅಕ್ಟೋಬರ್ 2020, 17:14 IST
ಬೀದರ್‌ನ ಅಂಬೇಡ್ಕರ್‌ ವೃತ್ತದಲ್ಲಿ ವಾಟಾಳ್‌‌ ಪಕ್ಷದ ಸಂಸ್ಥಾಪಕ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು
ಬೀದರ್‌ನ ಅಂಬೇಡ್ಕರ್‌ ವೃತ್ತದಲ್ಲಿ ವಾಟಾಳ್‌‌ ಪಕ್ಷದ ಸಂಸ್ಥಾಪಕ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು   

ಬೀದರ್‌: ‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಹಾಗೂ ನದಿಗಳಿಗೆ ಬಂದ ಪ್ರವಾಹದಿಂದ ಕೋಟ್ಯಂತರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ರೈತರ ಬೆಳೆ ನೀರು ಪಾಲಾಗಿದೆ. ಹೀಗಾಗಿ ಸರ್ಕಾರ ತಕ್ಷಣ ಉತ್ತರ ಕರ್ನಾಟಕಕ್ಕೆ ₹50 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು’ ಎಂದು ವಾಟಾಳ್‌‌ ಪಕ್ಷದ ಸಂಸ್ಥಾಪಕ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ಕಡೆಗೆ ಹೋಗುತ್ತಾರೆ. ಆದರೆ, ಕರ್ನಾಟಕಕ್ಕೆ ಬರುತ್ತಿಲ್ಲ. ನೆರೆಯಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘₹10 ಸಾವಿರ ಕೋಟಿ ವೆಚ್ಚದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಪಡಿಸಬೇಕು. ಅನುಭವ ಮಂಟಪವನ್ನು ವಿಶ್ವಕ್ಕೆ ಪರಿಚಯಿಸಬೇಕು’ ಎಂದು ಒತ್ತಾಯಿಸಿದರು.

‘ಶಿಕ್ಷಕರ ಹಿತವನ್ನು ಗಮನದಲ್ಲಿರಿಸಿಕೊಂಡು ವಿಧಾನ ಪರಿಷತ್ತಿಗೆ ಸ್ಪರ್ಧಿಸಿದ್ದೇನೆ. ವಿಧಾನ ಪರಿಷತ್ತಿಗೆ ಆಯ್ಕೆಯಾದರೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಕೋವಿಡ್‌ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ನವೆಂಬರ್‌ 17ರಂದು ಶಾಲಾ– ಕಾಲೇಜುಗಳನ್ನು ಆರಂಭಿಸಬಾರದು. ಸರ್ಕಾರ ವಿದ್ಯಾರ್ಥಿಗಳ ಹಿತ ಕಡೆಗಣಿಸಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.