ADVERTISEMENT

ಧರ್ಮದ ಆಧಾರದ ಮೇಲೆ ದೇಶ ವಿಭನೆಗೆ ಅವಕಾಶ ಬೇಡ- ಮಾವಳ್ಳಿ ಶಂಕರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:57 IST
Last Updated 27 ನವೆಂಬರ್ 2025, 5:57 IST
ಬೀದರ್ ನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸದಸ್ಯತ್ವ ಆಂದೋಲನ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು
ಬೀದರ್ ನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸದಸ್ಯತ್ವ ಆಂದೋಲನ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು   

ಬೀದರ್: ‘ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಕಾರ್ಯ ಸಲ್ಲದು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದು ದೇಶದಲ್ಲಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ದಲಿತರು, ಹಿಂದುಳಿದವರ ಮತ್ತು ಶೋಷಿತರ ಹಕ್ಕುಗಳನ್ನು ಕಸಿಯುವ ವ್ಯವಸ್ಥಿತ ಷಡ್ಯಂತ ನಡೆಯುತ್ತಿದೆ. ಆರ್‌ಎಸ್‌ಎಸ್ ಮಾಡುವ ತಾರತಮ್ಯ ನೀತಿಗೆ ನಮ್ಮ ಬೆಂಬಲವಿಲ್ಲ. ಆರ್‌ಎಸ್‌ಎಸ್ ಮುಖಂಡ ಮೋಹನ ಭಾಗವತ್ ಅವರು ವಿಷಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ದಲಿತರ, ರೈತರ ಮತ್ತು ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಅಪಾಯಕ್ಕೆ ಸಿಲುಕುವ ಸಂಭವವಿದೆ’ ಎಂದು ಹೇಳಿದರು.

‘ಸಂವಿಧಾನದ ನಿಜ ಸಂಗತಿ ಜನತೆಗೆ ತಲುಪುತ್ತಿಲ್ಲ. ಪ್ರಧಾನಮಂತ್ರಿಗಳ ಮಾತು ಕೇಳುತ್ತಿದ್ದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ದಲಿತ ಸಂಘರ್ಷ ಸಮಿತಿಯು ಜನತೆಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದೆ. ಬೀದರ್‌ನಿಂದ ಈ ಕೆಲಸ ಆಗುತ್ತಿದೆ. ದಲಿತ ಸಂಘರ್ಷ ಸಮಿತಿಯ ಸದಸ್ಯತ್ವಕ್ಕೆ ಚಾಲನೆ ನೀಡುತ್ತಿದ್ದೇವೆ. ಜಾತಿ ಮತ ಪಂಥಗಳ ಭೇದವಿಲ್ಲದೆ ಸದಸ್ಯರಾಗಬಹುದು. 1 ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ದಲಿತ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ ಮಾತನಾಡಿ, ‘ಸಂವಿಧಾನಾತ್ಮಕವಾಗಿ ನೋಂದಾಯಿತ ಸಂಘಟನೆ ಅಲ್ಲದಿದ್ದರೂ ಆರ್‌ಎಸ್‌ಎಸ್ ಜನರಿಗೆ ಭಾವನಾತ್ಮಕವಾಗಿ ಉದ್ರೇಕಕ್ಕೆ ತಳ್ಳುತ್ತ ದೇಶದ ಮುಖ್ಯ ಅಂಶಗಳ ಕಡೆಗೆ ವಿಮುಖರನ್ನಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯು ನ್ಯಾಯ ಸಮಾನತೆ, ಸಮಸಮಾಜದ ಪರಿಕಲ್ಪನೆ ಇಟ್ಟುಕೊಂಡು ಹೋರಾಡುತ್ತಿದೆ’ ಎಂದು ಹೇಳಿದರು.

ಪತ್ರಕರ್ತ ಎನ್.ನಾಗರಾಜ, ಡಿ.ಎಸ್.ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ, ರಾಜಕುಮಾರ ಬನ್ನೇರ್, ನಾಗಣ್ಣ ಬಡಿಗೇರ, ರಾಮಣ್ಣ ಕಲದೇವನಹಳ್ಳಿ, ರಂಜಿತಾ ಜೈನೂರ್, ಜಗದೇವಿ ಭಂಡಾರಿ, ದೈವಶೀಲಾ ಉಪಸ್ಥಿತರಿದ್ದರು.

‘ಆರ್‌ಎಸ್‌ಎಸ್ ಸಂವಿಧಾನ ಅಂಬೇಡ್ಕರ್ ಒಪ್ಪಲ್ಲ’ ‘ಆರ್‌ಎಸ್‌ಎಸ್‌ನವರು ಈ ದೇಶದ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಜರ್ ಅವರನ್ನು ಒಪ್ಪಲ್ಲ. ಅನೇಕ ಸಲ ಅವರು ಸಂವಿಧಾನವನ್ಮು ಸುಟ್ಟು ಹಾಕಿದ್ದಾರೆ. ಇದು ಅವರ ಮನಃಸ್ಥಿತಿ ತೋರಿಸುತ್ತದೆ’ ಎಂದು ಮುಖಂಡ ನಾಗತಿಹಳ್ಳಿ ನಾಗರಾಜ್ ಹೇಳಿದರು. ಸಂವಿಧಾನದಿಂದ ಈ ದೇಶ ನಡೆಸಬಹುದು ಹೊರತು ಮಹಾಭಾರತದಿಂದಲ್ಲ. ಆದರೆ ಆರ್‌ಎಸ್‌ಎಸ್ ಮಹಾಭಾರತದ ಮೂಲಕ ದೇಶ ನಡೆಸಲು ಹುನ್ನಾರ ನಡೆಸುತ್ತಿದೆ. ದಲಿತರ ಮೇಲೆ ದೌರ್ಜನ್ಯ ವಾದಾಗ ಆರ್‌ಎಸ್‌ಎಸ್‌ನವರು ಎಂದೂ ಧ್ವನಿ ಎತ್ತಿಲ್ಲ. ಅವರ ನಿಜ ಚಹರೆ ಬಯಲಾಗುತ್ತಿದ್ದು ಅನೇಕರು ಆ ಸಂಘಟನೆ ತೊರೆಯುತ್ತಿದ್ದಾರೆ ಎಂದರು.

‘ಆರ್‌ಎಸ್‌ಎಸ್‌ ವಿರುದ್ಧ ಡಿಎಸ್‌ಎಸ್ ಪ್ರತಿರೋಧ ಅಭಿಯಾನ’ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ದಲಿತ ಸಂಘರ್ಷ ಸಮಿತಿ ರಾಜ್ಯದಾದ್ಯಂತ ಪ್ರತಿರೋಧ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮಾವಳ್ಳಿ ಶಂಕರ್ ತಿಳಿಸಿದರು. ನವೆಂಬರ್ 26ರಿಂದ ಬರುವ ಜನವರಿ 26ರ ವರೆಗೆ ಈ ಅಭಿಯಾನ ನಡೆಯಲಿದೆ. ದಲಿತ ಸಂಘರ್ಷ ಸಮಿತಿಯ ಸದಸ್ಯತ್ವದ ಜೊತೆಗೆ ಅಭಿಯಾನ ನಡೆಯಲಿದೆ. ಆರ್‌ಎಸ್ಎಸ್ ಉದ್ದೇಶ ಸಂವಿಧಾನದ ಆಶಯ ಆರ್‌ಎಸ್‌ಎಸ್ ಅದಕ್ಕೆ ವಿರುದ್ಧವಾಗಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ತಿಳಿಸಲಾಗುವುದು. ಸಂವಿಧಾನ ಜಾರಿಗೆ ಬಂದ ದಿನವೇ ಅದನ್ನು ವಿರೋಧಿಸಿ ಸಂವಿಧಾನ ಸುಟ್ಟು ಹಾಕಿದ್ದು ಇದೇ ಆರ್‌ಎಸ್‌ಎಸ್’ ಎಂದು ಹೇಳಿದರು. ಸಂವಿಧಾನ ಹಾಗೂ ಬ್ರಾಹ್ಮಣ್ಯದ ವಿರುದ್ಧದ ಹೋರಾಟವಿದು. ಆರ್‌ಎಸ್‌ಎಸ್ ಈ ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಯತ್ನಿಸುತ್ತಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅದರ ನಿಜ ಚಹರೆಯನ್ನು ಜನರಿಗೆ ತೋರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.