ಬೀದರ್: ‘ಈ ದೇಶದ ಸಂವಿಧಾನಕ್ಕಿಂತ ಮನುಸ್ಮೃತಿ ದೊಡ್ಡದು ಎಂಬ ಅಜೆಂಡಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೊಂದಿದೆ. ಬಹುತ್ವಕ್ಕೆ ವಿರುದ್ಧವಾದ ಈ ಸಂಘಟನೆ ಯುವಜನರಿಗೆ ಜಾತಿಯತೆಯ ತರಬೇತಿ ನೀಡುತ್ತಿದೆ. ಆದಕಾರಣ ಈ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು’ ಎಂದು ‘ಜನರ ಧ್ವನಿ’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಂಕುಶ್ ಗೋಖಲೆ ಆಗ್ರಹಿಸಿದರು.
ಆರ್.ಎಸ್.ಎಸ್ ಒಂದು ನೋಂದಣಿ ಇಲ್ಲದ ಸಂಘಟನೆ. ಇದರಲ್ಲಿ ಎಸ್.ಸಿ., ಎಸ್.ಟಿ., ಒ.ಬಿ.ಸಿ. ಕೆಟಗರಿಯ ಯುವಜನರನ್ನು ಸಂಘಟನೆ ಹೆಸರಲ್ಲಿ ಸೇರಿಸಿಕೊಂಡು ಅವರಿಗೆ ಜಾತಿಯತೆಯ ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ಗ್ವಾಲಿಯರ್ ಮೂಲದ ನಿವಾಸಿ ವಕೀಲ ಅನಿಲ ಮಿಶ್ರಾ ಎಂಬಾತ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಬ್ರಿಟಿಷರ ಏಜೆಂಟ್ ಎಂದು ಕರೆಯುವ ಮೂಲಕ ಬಹುತ್ವವಿರುವ ಈ ದೇಶದ ಸಂವಿಧಾನಕ್ಕಿಂತ ಮನುಸ್ಮೃತಿ, ಹಿಂದುತ್ವ ದೊಡ್ಡದು ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಿದ್ದಾನೆ. ಈ ಸಂಘಟನೆಯವರು ಬಸವಣ್ಣನವರ ತತ್ವಾದರ್ಶಗಳಿಗೆ ತಿಲಾಂಜಲಿ ಇಡಲು ಮುಂದಾಗಿರುವುದು ದೊಡ್ಡ ದುರಂತ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಬಗ್ಗೆ ಮೃದು ಧೋರಣೆ ತಾಳಿರುವುದು ನೋಡಿದರೆ ಕಾಂಗ್ರೆಸ್‌ನಲ್ಲೂ ಆ ಸಂಘಟನೆಯ ಕೂಸುಗಳಿವೆ ಎಂಬುದು ಗೊತ್ತಾಗುತ್ತದೆ. ಪ್ರಜಾಪ್ರಭುತ್ವ ಹಾಗೂ ಬಹುತ್ವಕ್ಕೆ ವಿರುದ್ದವಾದ ಆರ್.ಎಸ್.ಎಸ್ ಸಂಘಟನೆಯನ್ನು ಕೂಡಲೇ ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದವ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗ್ವಾಲಿಯರ್‌ನ ವಕೀಲ ಮಿಶ್ರಾಗೂ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಶಿಂಧೆ, ಮುಖಂಡರಾದ ತಿಪ್ಪಣ್ಣ ವಾಲಿ, ಎಮ್.ಡಿ. ಜಮೀಲ್ ಖಾನ್, ರವಿ ಕೋಟೇರ್, ಮಾರುತಿ ಕಾಂಬಳೆ, ದತ್ತಾತ್ರಿ ನಾಗವಂಶಿ, ಬಾಬಾ ಪಟೇಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.