ADVERTISEMENT

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ವ್ಯಕ್ತಿಯಲ್ಲ, ಭಗವಾ ಧ್ವಜವೇ ಗುರು: ಶ್ರೀಧರ ಜೋಶಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ; ಆಕರ್ಷಕ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 14:17 IST
Last Updated 12 ಅಕ್ಟೋಬರ್ 2025, 14:17 IST
<div class="paragraphs"><p>ಶ್ರೀಧರ ಜೋಶಿ</p></div>

ಶ್ರೀಧರ ಜೋಶಿ

   

ಬೀದರ್‌: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನೂರು ವರ್ಷ ಪೂರೈಸಿರುವುದು ಹಾಗೂ ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಸಂಜೆ ಸಂಘದ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಸ್ವಯಂ ಸೇವಕರು ಸಂಘದ ಸಮವಸ್ತ್ರ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ನಗರದ ಸರಸ್ವತಿ ಶಾಲೆಯಿಂದ ಆರಂಭಗೊಂಡ ಪಥ ಸಂಚಲನವು ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ಶಹಾಗಂಜ ಕಮಾನ್‌, ಜೂನಿಯರ್ ಕಾಲೇಜು, ವಿನಾಯಕ ವೃತ್ತ, ಚೌಬಾರ, ಪಾಂಡುರಂಗ ಮಂದಿರ, ವನವಾಸಿ ರಾಮಮಂದಿರ, ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಶಿವಾಜಿ ವೃತ್ತ, ಹರಳಯ್ಯಾ ವೃತ್ತ, ಗುದಗೆ ಆಸ್ಪತ್ರೆ, ಕನ್ನಡಾಂಬೆ ವೃತ್ತದ ಮಾರ್ಗವಾಗಿ ಸಾಯಿ ಶಾಲೆ ಮೈದಾನ ತಲುಪಿತುರು. ಪಥ ಸಂಚಲನದ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಭಗವಾ ಧ್ವಜ, ಕೇಸರಿ ಬಂಟಿಂಗ್ಸ್‌ಗಳನ್ನು ಕಟ್ಟಲಾಗಿತ್ತು.

ADVERTISEMENT

ನಗರದ ಪ್ರಮುಖ ಬೀದಿಗಳನ್ನು ರಂಗೋಲಿಯಿಂದ ಅಲಂಕರಿಸಲಾಗಿತ್ತು. ಪಥ ಸಂಚಲನ ಹಾದು ಹೋಗುವಾಗ ಸಾರ್ವಜನಿಕರು ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಸ್ವಾಗತಿಸಿದರು. ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಹಾಕಿದರು.

ಸಂಘಕ್ಕೆ ವ್ಯಕ್ತಿಯಲ್ಲ, ಭಗವಾ ಧ್ವಜ ಗುರು: ಸಂಘದ ಉತ್ತರ ಕರ್ನಾಟಕದ ಸಾಮಾಜಿಕ ಸಾಮರಸ್ಯ ವೇದಿಕೆಯ ಪ್ರಾಂತ ಸಹ ಸಂಯೋಜಕ ಶ್ರೀಧರ ಜೋಶಿ ಮಾತನಾಡಿ, ಸಂಘದಲ್ಲಿ ವ್ಯಕ್ತಿ ಗುರುವಲ್ಲ, ಸಂಘಕ್ಕೆ ಭಗವಾ ಧ್ವಜವೆ ಗುರು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿ ಕ್ಷೇತ್ರದಲ್ಲಿ ಎಬಿವಿಪಿ, ಧರ್ಮದ ಕ್ಷೇತ್ರದಲ್ಲಿ ವಿಎಚ್‌ಪಿ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಭಾರತಿ, ಕಾರ್ಮಿಕರ ಕ್ಷೇತ್ರದಲ್ಲಿ ಮಜ್ದೂರ್ ಸಂಘ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಂಘವು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಶತಾಬ್ದಿ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಸಮಾಜವನ್ನು ಜಾಗೃತಗೊಳಿಸುವುದು, ಯುವ ಜನತೆಯಲ್ಲಿ ದೇಶಭಕ್ತಿ ಮೂಡಿಸುತ್ತಿದೆ. ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವುದರ ಜೊತೆಗೆ ಅಖಂಡ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದರು.

ಸಂಘವು ನಡೆದು ಬಂದ ಹಾದಿ ಸುಲಭವಾಗಿರಲಿಲ್ಲ. ಬಹಳಷ್ಟು ಕಷ್ಟಗಳನ್ನು ಎದುರಿಸಿದೆ. ಹೋರಾಟಗಳ ಮೂಲಕ ವಂದೆ ಮಾತರಂ, ಭಾರತ್ ಮಾತಾ ಕೀ ಜೈ, ಗರ್ವ್‌ ಸೇ ಕಹೋ ಹಮ್‌ ಹಿಂದೂ ಹೈ ಎಂದು ಹೇಳುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅನೇಕ ಹೋರಾಟಗಳ ಮೂಲಕ ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಸ್ಮಾರಕ, ಅಯೋಧ್ಯೆಯಲ್ಲಿನ ರಾಮಮಂದಿರ, ರಾಮಸೇತು, ಅಮರನಾಥ ಯಾತ್ರೆ, ತಿರುಪತಿ ದೇವಸ್ಥಾನ, ಧರ್ಮಸ್ಥಳ ದೇವಸ್ಥಾನದ ಉಳಿವಿಗೆ ಹೋರಾಟದ ಮೂಲಕ ನ್ಯಾಯ ಪಡೆದುಕೊಂಡಿರುವುದು ಸಂಘದ ಶಕ್ತಿ ಎಂದು ತಿಳಿಸಿದರು.

ಸಂಘದ ಸ್ವಯಂಸೇವಕರೆಲ್ಲರೂ ಸಂಘದ ಶತಾಬ್ದಿಯ ಪ್ರಯುಕ್ತ ಪಂಚ ಪರಿವರ್ತನೆಗಳಾದ ಕುಟುಂಬ ಪದ್ದತಿ, ಸಾಮರಸ್ಯ, ನಾಗರಿಕ ಕರ್ತವ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಸಹಕರಿಸೋಣ ಎಂದರು.

ಮುಖ್ಯ ಅತಿಥಿಗಳಾಗಿದ್ದ ಗುರುದ್ವಾರ ನಾನಕ ಝೀರಾದ ಜಗಜೀತ್ ಸಿಂಗ್ ಮಾತನಾಡಿ, ಸಂಘವು ದೇಶದಾದ್ಯಂತ ಶಾಖೆಗಳ ಮೂಲಕ ಯುವಕರಲ್ಲಿ ಸಂಸ್ಕಾರ, ಸೇವೆ ಹಾಗೂ ದೇಶಭಕ್ತಿಯನ್ನು ಕಲಿಸಿ, ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸಂಘದ ಪ್ರಮುಖರಾದ ಹಣಮಂತರಾವ್‌ ಪಾಟೀಲ, ಶಿವರಾಜ ಹಲಶೆಟ್ಟಿ, ಶಿವಲಿಂಗ ಕುಂಬಾರ, ಕೃಷ್ಣಾರೆಡ್ಡಿ, ಭಾರ್ಗವಚಾರಿ, ರವಿಚಂದ್ರ, ಕಮಲಾಕರ ಸ್ವಾಮಿ, ಜಗನ್ನಾಥ ರೆಡ್ಡಿ, ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಕೇಂದ್ರದ ಮಾಜಿಸಚಿವ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಬಾಬುವಾಲಿ, ರಘುನಾಥರಾವ್‌ ಮಲ್ಕಾಪುರೆ, ಬಾಬುರಾವ ಮದಕಟ್ಟಿ, ಎನ್.ಆರ್ ವರ್ಮಾ, ಗುರುನಾಥ ಜ್ಯಾಂತಿಕರ್, ಈಶ್ವರ ಸಿಂಗ್‌ ಠಾಕೂರ್‌, ಗುರುನಾಥ ರಾಜಗೀರಾ, ಪೀರಪ್ಪ ಔರಾದೆ, ವಿಜಯಕುಮಾರ ಪಾಟೀಲ ಗಾದಗಿ, ಶಶಿ ಹೊಸಳ್ಳಿ, ಮಹೇಶ್ವರ ಸ್ವಾಮಿ, ವೀರಶೆಟ್ಟಿ ಖ್ಯಾಮಾ, ನಿತಿನ್ ಕರ್ಪೂರ್ ಇತರರಿದ್ದರು.

ಪ್ರವೀಣ ಅವರು ವೈಯಕ್ತಿಕ ಗೀತೆ ಹಾಡಿದರು. ರವಿಚಂದ್ರ ಅವರು ನಿರೂಪಿಸಿದರೆ, ವೆಂಕಟ್‌ ಪಾಟೀಲ ವಂದಿಸಿದರು.

ಪಂಚ ಪರಿವರ್ತನೆಗಳಾದ ಕುಟುಂಬ ಪದ್ದತಿ, ಸಾಮರಸ್ಯ, ನಾಗರಿಕ ಕರ್ತವ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ದೇಶದ ಪ್ರಗತಿಗೆ ಕೈಜೋಡಿಸಬೇಕು.
-ಶ್ರೀಧರ ಜೋಶಿ, ಪ್ರಾಂತ ಸಹ ಸಂಯೋಜಕ, ಸಂಘದ ಉತ್ತರ ಕರ್ನಾಟಕದ ಸಾಮಾಜಿಕ ಸಾಮರಸ್ಯ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.