ಸಂಪುಟದಿಂದ ಸಚಿವ ಪ್ರಿಯಾಂಕ್ ಖರ್ಗೆ ವಜಾಗೊಳಿಸಿ–ವಿಜಯೇಂದ್ರ ಆಗ್ರಹ
ಕಟ್ಟಿತೂಗಾಂವ್ (ಬೀದರ್ ಜಿಲ್ಲೆ): ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಪಕ್ಷದ ಮುಖಂಡರನ್ನು ಒಳಗೊಂಡ ನಿಯೋಗ ಭಾನುವಾರ ಸಂಜೆ ಇಲ್ಲಿನ ಮೃತ ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು.
ವಿಜಯೇಂದ್ರ ಅವರು ಸಚಿನ್ ಅವರ ಮನೆಯೊಳಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸಚಿನ್ ಅವರ ಭಾವಚಿತ್ರಕ್ಕೆ ಮಾಲೆ ಹಾಕಿ, ಸಾಂತ್ವನ ಹೇಳಿ, ಧೈರ್ಯ ತುಂಬಿದರು. ‘ನಿಮ್ಮ ಜೊತೆಗೆ ನಾವಿದ್ದೇವೆ’ ಎಂದರು. ಮುಚ್ಚಿದ ಲಕೋಟೆಯಲ್ಲಿ ನಗದು ಪರಿಹಾರ ಕೊಡಲು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಂದಾದಾಗ ಸಚಿನ್ ಸಹೋದರಿಯರು ಅದನ್ನು ನಿರಾಕರಿಸಿದರು. ವಿಜಯೇಂದ್ರ ಅವರು ಕೈಮುಗಿದು ಕೇಳಿಕೊಂಡರು ಸ್ವೀಕರಿಸಲಿಲ್ಲ. ‘ನಮಗೆ ಪರಿಹಾರ ಬೇಕಿಲ್ಲ. ಸಚಿನ್ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಸಾಕು’ ಎಂದು ಹೇಳಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರ ₹1 ಕೋಟಿ ಪರಿಹಾರ ಒದಗಿಸಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡಬೇಕು. ಇದು ಸಚಿನ್ ಅವರ ಆತ್ಮಹತ್ಯೆಯಲ್ಲ, ಸರ್ಕಾರವೇ ವ್ಯವಸ್ಥಿತವಾಗಿ ಮಾಡಿದ ಕೊಲೆ. ಮುಖ್ಯಮಂತ್ರಿಯವರು ಖರ್ಗೆ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಸಿಬಿಐ ಹೊರತುಪಡಿಸಿ ಇನ್ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೆ ಬಿಜೆಪಿ ಒಪ್ಪುವುದಿಲ್ಲ. ರಾಜ್ಯದ ಸಂಸ್ಥೆಗಳಿಂದ ತನಿಖೆ ನಡೆಸಿದರೆ ಪ್ರಿಯಾಂಕ್ ಖರ್ಗೆ ಅವರು ಸಚಿನ್ ಅವರ ಕುಟುಂಬದವರನ್ನು ಹೆದರಿಸಬಹುದು ಎಂದರು.
ಸಚಿನ್ ಕುಟುಂಬಸ್ಥರು ನಮಗೆ ರಕ್ಷಣೆ ಬೇಕು ಎಂದು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ರಕ್ಷಣೆ ಒದಗಿಸಬೇಕು. ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಯಾರೂ ಬೆಳೆಯಬಾರದು. ಅವರು ಬೆಳೆದರೆ ಅವರನ್ನು ಕೊಲೆ ಮಾಡಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ, ಎಂ.ಜಿ. ಮುಳೆ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ಬಸವರಾಜ ಮತ್ತಿಮಡು,
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, , ಮುಖಂಡರಾದ ಪ್ರಕಾಶ ಖಂಡ್ರೆ, ಶಶಿಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಮತ್ತಿತರರು ಹಾಜರಿದ್ದರು.
‘ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದರೆ ಸಿಎಂ ಸ್ಥಾನಕ್ಕೆ ಕುತ್ತು’
‘ಪ್ರಿಯಾಂಕ್ ಖರ್ಗೆ ಅವರು ಯಾರ ಮಗ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದೆ. ಒಂದುವೇಳೆ ಪ್ರಿಯಾಂಕ್ ಅವರ ರಾಜೀನಾಮೆ ಪಡೆದರೆ ಸಿಎಂ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು ಸುಪಾರಿ ಖರ್ಗೆ ಆಗಿದ್ದಾರೆ. ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಡೆತ್‌ನೋಟ್ ಬರೆದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಸಹೋದರರನ್ನು ರಕ್ಷಿಸುವಂತೆ ಸಹೋದರಿಯರು ಪೊಲೀಸ್ ಠಾಣೆಗೆ ಹೋಗಿ ಕೇಳಿಕೊಂಡರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರಿಯಾಂಕ್ ಖರ್ಗೆ ಅವರು ಈ ಕೇಸ್‌ನಲ್ಲಿ ಇದ್ದಾರೆಂದು ಪೊಲೀಸರು ದೂರು ಸ್ವೀಕರಿಸಲಿಲ್ಲ. ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಬೆನ್ನೆಲುಬಾಗಿದ್ದಾರೆ ಎಂದು ಆರೋಪಿಸಿದರು.
‘ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಮ್ಮ ಹೋರಾಟದ ಬಗ್ಗೆ ಒಂದೆರೆಡು ದಿನಗಳಲ್ಲಿ ತೀರ್ಮಾನಿಸುತ್ತೇವೆ. ಸಿಬಿಐ ತನಿಖೆಗೆ ವಹಿಸುವವರೆಗೆ ಸುಮ್ಮನಿರುವುದಿಲ್ಲ’ ಎಂದರು.
‘ಪೊಲೀಸರ ನಿರ್ಲಕ್ಷ್ಯದಿಂದ ಸಚಿನ್ ಸಾವು’
‘ಪೊಲೀಸರ ನಿರ್ಲಕ್ಷ್ಯದಿಂದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಸಾವಾಗಿದೆ. ಸಚಿನ್ ಕಾಣೆಯಾಗಿದ್ದಾನೆ ಎಂದು ಅವರ ಸಹೋದರಿಯರು ಪೊಲೀಸ್ ಠಾಣೆಗೆ ಹೋಗಿ ತಿಳಿಸಿದರೂ ಪೊಲೀಸರು ಏನೂ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಸಹೋದರನ ಉಳಿಸಿಕೊಂಡು ಎಂದು ಗೋಗರೆದರೂ ಪೊಲೀಸರು ಕಿವಿಗೊಟ್ಟಿಲ್ಲ. ಮನುಷ್ಯತ್ವ ಇದ್ದವರು ಈ ರೀತಿ ಮಾಡುವುದಿಲ್ಲ. ಸಚಿನ್ ಅವರ ಸಹೋದರಿಯರ ಮನೆಗೆ ಬಂದು ಧಮ್ಕಿ ಹಾಕಿದ್ದಾರೆ. ಸಹೋದರಿಯರ ಮಾನಕ್ಕೆ ಹೆದರಿ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
‘ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮಾನ– ಮರ್ಯಾದೆ ಇದ್ದರೆ ಸಚಿನ್ ಕುಟುಂಬದವರ ಮನವಿಯಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಎಲ್ಲ ಪ್ರಕರಣಗಳನ್ನು ಸರ್ಕಾರ ಮುಚ್ಚಿ ಹಾಕಿದೆ. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ’ ಎಂದು ಗಂಭೀರ ಆರೋಪ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.