ADVERTISEMENT

ಬಸವಕಲ್ಯಾಣ: ಸದ್ಗುರು ಸದಾನಂದ ಮಠದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:15 IST
Last Updated 12 ಜುಲೈ 2025, 6:15 IST
ಬಸವಕಲ್ಯಾಣದ ಸದ್ಗುರು ಸದಾನಂದ ಸರಸ್ವತಿ ಮಹಾರಾಜ ಮಠದ ಜಾತ್ರೆಯಲ್ಲಿ ಶುಕ್ರವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು 
ಬಸವಕಲ್ಯಾಣದ ಸದ್ಗುರು ಸದಾನಂದ ಸರಸ್ವತಿ ಮಹಾರಾಜ ಮಠದ ಜಾತ್ರೆಯಲ್ಲಿ ಶುಕ್ರವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು    

ಬಸವಕಲ್ಯಾಣ: ನಗರದ ಸದ್ಗುರು ಸದಾನಂದ ಸರಸ್ವತಿ ಮಹಾರಾಜ ಮಠದಲ್ಲಿ ಗುರು ಪೂರ್ಣಿಗೆ ಅಂಗವಾಗಿ ಶುಕ್ರವಾರ ಜಾತ್ರೆ ನೆರವೆರಿತು.

ಸದಾನಂದ ಸ್ವಾಮೀಜಿಯವರ ಸಮಾಧಿ ಸ್ಥಾನವಾದ ಮಠಕ್ಕೆ ತಳಿರು ತೋರಣ ಕಟ್ಟಿ, ವಿದ್ಯುತ್ ದೀಪ ಅಳವಡಿಸಿ ಸಿಂಗರಿಸಲಾಗಿತ್ತು. ಇಡೀ ದಿನ ಭಕ್ತರು ಸಾಲಿನಲ್ಲಿ ನಿಂತು ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು. ಭಜನೆ, ಅನ್ನಸಂತರ್ಪಣೆಯೂ ನಡೆಯಿತು.

ಸೂರ್ಯಾಸ್ತದೊಂದಿಗೆ ಮೊಸರಿನ ಗಡಿಗೆ ಒಡೆಯುವ ಗೋಪಾಲ ಕಾಲಾ ಆಯೋಜಿಸಲಾಗಿತ್ತು. ಇದಕ್ಕೂ ಮೊದಲು ವಾದ್ಯ ಮೇಳ ಮತ್ತು ಛತ್ರಿ ಚಾಮರಗಳೊಂದಿಗೆ ಪಲ್ಲಕ್ಕಿ ಪ್ರದಕ್ಷಿಣೆ ನಡೆಸಲಾಯಿತು. ನಂತರ ಆವರಣದಲ್ಲಿನ ಆಲದ ಮರಕ್ಕೆ ಮೊಸರಿನ ಎರಡು ಗಡಿಗೆಗಳನ್ನು ಕಟ್ಟಿ ಜಯಘೋಷದೊಂದಿಗೆ ಒಡೆದು ಪ್ರಸಾದ ವಿತರಿಸಲಾಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದರು. 

ADVERTISEMENT
ಬಸವಕಲ್ಯಾಣದ ಸದ್ಗುರು ಸದಾನಂದ ಸರಸ್ವತಿ ಮಹಾರಾಜ ಮಠದ ಜಾತ್ರೆಯಲ್ಲಿ ಶುಕ್ರವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು 
ಬಸವಕಲ್ಯಾಣದ ಸದ್ಗುರು ಸದಾನಂದ ಸರಸ್ವತಿ ಮಹಾರಾಜ ಮಠದ ಜಾತ್ರೆಯಲ್ಲಿ ಶುಕ್ರವಾರ ಬಿದಿರು ಬುಟ್ಟಿಗಳನ್ನು ಖರೀದಿಸುತ್ತಿರುವುದು

ಮಳೆ ಸುರಿಯುವುದು ನಿಶ್ಚಿತ:

ಈ ಜಾತ್ರೆಯ ದಿನ ಮಳೆ ಸುರಿಯುವುದು ನಿಶ್ಚಿತ ಎಂದೇ ಭಕ್ತರು ನಂಬಿದ್ದಾರೆ. ಪ್ರತಿವರ್ಷ ಪಲ್ಲಕ್ಕಿ ಮೆರವಣಿಗೆ ಹಾಗೂ ಮೊಸರಿನ ಗಡಿಗೆ ಒಡೆಯುವ ಗೋಪಾಲಕಾಲಾ ಬಳಿಕ ಮಳೆ ಬರುತ್ತದೆ. ಆದರೆ ಈ ಸಲ ಮಧ್ಯಾಹ್ನವೇ ವರ್ಷಾಧಾರೆ ಸುರಿದು ವಾತಾವರಣ ತಂಪಾಗಿರುವುದಕ್ಕೆ ಸಂತಸವಾಗಿದೆ ಎಂದು ಭಕ್ತರೊಬ್ಬರು ಹೇಳಿದರು. ನಗರದಲ್ಲಿನ ಮತ್ತು ಸುತ್ತಲಿನ ಊರುಗಳ ವಿವಿಧ ಜಾತಿ ಧರ್ಮಗಳ ಅನೇಕ ಭಕ್ತರು ಪಾಲ್ಗೊಂಡಿದ್ದರು. ಡಾ.ಅಂಬೇಡ್ಕರ್ ವೃತ್ತದಿಂದ ಹಾಗೂ ರಾಜಕಮಲ ಹೋಟೆಲ್ ಹತ್ತಿರದಿಂದ ಮುಖ್ಯ ರಸ್ತೆಯ ಮೂಲಕ ಮಠದ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬಿದಿರು ಬುಟ್ಟಿಗಳ ಮಾರಾಟದ ವೈಶಿಷ್ಟ್ಯ:

ಈ ಜಾತ್ರೆಯಲ್ಲಿ ಬಿದಿರು ಬುಟ್ಟಿ ಕೇರುವ ಮರ ಹಾಗೂ ಬಿದಿರಿನಿಂದ ತಯಾರಿಸಿದ ವಿವಿಧ ಸಾಮಗ್ರಿಗಳ ಮಾರಾಟವಾಗುವುದು ವಿಶೇಷವಾಗಿದೆ. ಬೆಂಡು ಬತ್ತಾಸು ಮಕ್ಕಳ ಆಟಿಕೆಗಳು ಅಳ್ಳಿನ ಖಾರಾ ಚಿಡುವಾ ಸೇವು ತರಕಾರಿ ಬಟ್ಟೆ ಒಳಗೊಂಡು ವಿವಿಧ ಬಗೆಯ ತಿನಿಸುಗಳ ಮಾರಾಟದ ಅಂಗಡಿಗಳು ಇದ್ದವು. ಆದರೆ ಬಿದಿರಿನ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಇದು ನಗರ ಆಗಿದ್ದರೂ ಬಗೆಬಗೆಯ ಹಾಗೂ ಉತ್ತಮ ರೀತಿಯ ಇಂಥ ಸಾಮಗ್ರಿಗಳು ಈ ಜಾತ್ರೆಯಲ್ಲಿಯೇ ಸಿಗುತ್ತವೆ. ಆದ್ದರಿಂದ ಪ್ರತಿವರ್ಷ ಇಲ್ಲಿಯೇ ಇವನ್ನು ಖರೀದಿಸಿ ಒಯ್ಯುತ್ತೇವೆ ಎಂದು ಅಕ್ಕನಾಗಮ್ಮ ಮಹಿಳಾ ಮಂಡಳದ ಸದಸ್ಯೆ ಸಂಗೀತಾ ಬಸಪ್ಪ ಹೇಳಿದರು. ಈ ದಿನ ಇಲ್ಲಿ ತರಕಾರಿಯೂ ಕಡಿಮೆ ಬೆಲೆಗೆ ಸಿಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.