
ಸಂಸದ ಸಾಗರ್ ಖಂಡ್ರೆ
ಬೀದರ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ ತರಲು ಉದ್ದೇಶಿಸಿರುವ ಬದಲಾವಣೆಗೆ ಸಂಸದ ಸಾಗರ್ ಖಂಡ್ರೆ ಅಸಮಧಾನ ವ್ಯಕ್ತಪಡಿಸಿದ್ದು, ಈ ಯೋಜನೆಯ ಹೆಸರು ಬದಲಾಯಿಸುವ ಮತ್ತು ಅದರ ಕಾನೂನು ಚೌಕಟ್ಟು ಮಾರ್ಪಡಿಸುವ ಕ್ರಮವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪರಂಪರೆ ಹಾಗೂ ಗ್ರಾಮೀಣ ಬಡವರ ಹಕ್ಕುಗಳ ಮೇಲೆ ನಡೆಸುತ್ತಿರುವ ನೇರ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಕ್ರಮವು ರಾಷ್ಟ್ರದ ಪರಂಪರೆಗೆ ಎಸಗಿದ ಅಪಮಾನ. ಮಹಾತ್ಮ ಗಾಂಧೀಜಿಯವರು ಈ ದೇಶದ ರಾಷ್ಟ್ರಪಿತ. ಶ್ರಮದ ಗೌರವ, ಗ್ರಾಮೀಣ ಸ್ವಾವಲಂಬನೆ ಮತ್ತು ಸಾಮಾಜಿಕ ನ್ಯಾಯದ ಅವರ ಆದರ್ಶಗಳನ್ನು ಗೌರವಿಸಲು ಈ ಯೋಜನೆಗೆ ಅವರ ಹೆಸರನ್ನು ಇಡಲಾಗಿತ್ತು ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಕ್ಕು ಆಧಾರಿತ ಈ ಐತಿಹಾಸಿಕ ಕಾಯ್ದೆಯಿಂದ ಅವರ ಹೆಸರನ್ನು ತೆಗೆದು ಹಾಕುವ ಯಾವುದೇ ಪ್ರಯತ್ನವು, ನಮ್ಮ ದೇಶವನ್ನು ವ್ಯಾಖ್ಯಾನಿಸುವ ಮೌಲ್ಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಹೊಸ ಮಸೂದೆಯು ನರೇಗಾ ಖಾತರಿಪಡಿಸಿದ್ದ ಶಾಸನಬದ್ಧ ‘ಕೆಲಸದ ಹಕ್ಕು’ ರದ್ದುಗೊಳಿಸಲು ಹೊರಟಿದೆ. ಇದು ಬೇಡಿಕೆ ಆಧಾರಿತ ಹಕ್ಕನ್ನು ಬದಲಿಸಿ, ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಒಂದು ಸಾಮಾನ್ಯ ಯೋಜನೆಯನ್ನಾಗಿ ಪರಿವರ್ತಿಸಲಿದೆ. ಇಲ್ಲಿ ಉದ್ಯೋಗದ ಯಾವುದೇ ಕಾನೂನು ಖಾತರಿ ಇರುವುದಿಲ್ಲ. ಪ್ರಸ್ತುತ ಇರುವ ಕಾಯ್ದೆಯಂತೆ, ಹೊಸ ಪ್ರಸ್ತಾವನೆ ಸಾರ್ವತ್ರಿಕ ವ್ಯಾಪ್ತಿಯನ್ನು ಹೊಂದಿಲ್ಲ. ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಜನರಿಗೆ ಕೆಲಸ ನೀಡುವ ಭರವಸೆಯನ್ನು ಇದು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಗಳ ಮೇಲೆ ಆರ್ಥಿಕ ಹೊರೆ
ಪ್ರಸ್ತುತ ನರೇಗಾ ಯೋಜನೆಯಡಿ ಕೂಲಿ ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಆದರೆ, ಉದ್ದೇಶಿತ ಮಸೂದೆಯು ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಅನುಪಾತದಲ್ಲಿ ಹಣ ಹಂಚಿಕೆಯ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತದೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದ್ದಾರೆ.
ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ವರ್ಗಾಯಿಸುವ ಮೂಲಕ ಮತ್ತು ಅನುದಾನಕ್ಕೆ ಮಿತಿ ಹೇರುವ ಮೂಲಕ ಕೇಂದ್ರ ಸರ್ಕಾರವು ಈ ಯೋಜನೆಯ ಮೂಲ ಬುನಾದಿಯನ್ನೇ ಹಾಳು ಮಾಡುತ್ತಿದೆ. ಈ ಬದಲಾವಣೆಯು ಸರ್ಕಾರದ ಬಡವರ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.