ADVERTISEMENT

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಸಂಗಮ ಸಜ್ಜು

ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿ ಗ್ರಾಮಸ್ಥರು

ಮನೋಜ ಕುಮಾರ್ ಗುದ್ದಿ
Published 22 ಫೆಬ್ರುವರಿ 2021, 6:02 IST
Last Updated 22 ಫೆಬ್ರುವರಿ 2021, 6:02 IST
ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮ ಹನುಮಾನ ಮಂದಿರದಿಂದ ಸಂಗಮೇಶ್ವರ ಮಂದಿರ ಕಡೆ ಹೋಗುವ ಸಿಸಿ ರಸ್ತೆ ಮಧ್ಯೆ ಚರಂಡಿ ನೀರು ಹರಿಯುತ್ತಿರುವುದು
ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮ ಹನುಮಾನ ಮಂದಿರದಿಂದ ಸಂಗಮೇಶ್ವರ ಮಂದಿರ ಕಡೆ ಹೋಗುವ ಸಿಸಿ ರಸ್ತೆ ಮಧ್ಯೆ ಚರಂಡಿ ನೀರು ಹರಿಯುತ್ತಿರುವುದು   

ಕಮಲನಗರ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಫೆ.22ರಂದು ಸೋಮವಾರ ಸಂಗಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಅಗತ್ಯ ಸಿದ್ಧತೆ ನಡೆಸಿದ ದೃಶ್ಯ ಭಾನುವಾರ ಕಂಡುಬಂತು.

ತಾಲ್ಲೂಕಿನ ಖೇಡ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಂಗಮ ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ವಾಸ್ತವ್ಯ ಮಾಡಲಿದ್ದಾರೆ. ಅದಕ್ಕೆ ಬೇಕಾದ ಅಗತ್ಯ ಮೂಲಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಖೇಡ್ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಸಜ್ಜುಗೊಂಡಿದೆ.

ತಾಲ್ಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಶೀಘ್ರವೇ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿದೆ.

ADVERTISEMENT

ರಸ್ತೆಗಳು ಹದಗೆಟ್ಟಿವೆ, ಪಶುಸಂಗೋಪನೆ ಆಸ್ಪತ್ರೆಗೆ ಸಮರ್ಪಕ ಕಟ್ಟಡವಿಲ್ಲ, ಅತಿಥಿಗೃಹ ಮತ್ತು ಕಾಂಪೌಂಡ್ ದುಸ್ಥಿತಿಯ್ಲಿವೆ. ಅರಣ್ಯ ಒತ್ತುವರಿ, ಅಂಗನವಾಡಿ ಕೇಂದ್ರ ಸಂಖ್ಯೆ-1ರಲ್ಲಿನ ಮೂರು ಕೋಣೆಗಳು ಶಿಥಿಲಾವಸ್ಥೆಯಲ್ಲಿವೆ. ಆರೋಗ್ಯ ಕೇಂದ್ರದ ಉಪಕೇಂದ್ರ ಚಾವಣಿ ಸೋರುತ್ತಿದೆ. ಗ್ರಾಮದಲ್ಲಿ ಅಳವಡಿಸಿದ ಹೈಮಾಸ್ಟ್ ದೀಪ ಇದ್ದು ಇಲ್ಲದಂತಿರುವುದು, ಸಿ.ಸಿ ರಸ್ತೆ ಮಧ್ಯೆ ಚರಂಡಿ ನೀರು ಹರಿಯುವುದು, ದೇವನದಿ ನಾಲಾಗೆ ಕಳಪೆ ಮಟ್ಟದಲ್ಲಿ ಕಟ್ಟಲಾದ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವುದು, ಸಮರ್ಪಕ ರಸ್ತೆ ಇಲ್ಲದಿರುವುದು, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ಸಿಗದಿರುವುದು ಸೇರಿದಂತೆ ಹೀಗೆ ಹತ್ತಾರು ಸಮಸ್ಯೆಗಳಿವೆ.

ಅಧಿಕಾರಿಗಳ ತಂಡ ಭೇಟಿ: ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೇ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಶರಣಯ್ಯ ಮಠಪತಿ, ಜಿಸ್ಕಾಂ ಎಇಇ ರವಿಕುಮಾರ ಕಾರಬರಿ, ಸಾಮಾಜಿಕ ಅರಣ್ಯ ಅಧಿಕಾರಿ ಹಾವಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲ ಕಾಳೆ, ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಜಿರ್ಗೆ, ಸಮೂಹ ಸಂನ್ಮೂಲ ವ್ಯಕ್ತಿ ಶಶಿಕುಮಾರ ಬಿಡವೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎಇಇ ಸೈಯದ್ ಫಸಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಧೂಳಪ್ಪ ಮುತ್ತಂಗಿ, ಗೌತಮ ಸಂಗಮಕರ್, ಜೆಇ ದೇವಾನಂದ ದೇಶಮುಖ, ಜೆಸ್ಕಾಂ ಜೆಇ ಬಸಲಿಂಗಪ್ಪ ಮಿರ್ಜಾಪುರೆ, ಗ್ರಾಮ ಲೆಕ್ಕಿಗ ಶಶಿಕುಮಾರ ಬಿರಾದಾರ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಚೌಬಳೆ, ಪ್ರವೀನ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಮಹಾಜನ, ಸಂಜೀವಕುಮಾರ ಶ್ರೀಗಿರೆ ಇದ್ದರು.

ಹೀಗಿದೆ ಸಂಗಮ ಗ್ರಾಮದ ಪರಿಚಯ

ಕಮಲನಗರ: ಖೇಡ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಮದಲ್ಲಿ ಪ್ರಸಿದ್ಧ ಸಂಗಮೇಶ್ವರ ದೇವಸ್ಥಾನ ಇದೆ. ಕನ್ನಡದ ಪಟ್ಟದ್ದೇವರೆಂದೆ ಖ್ಯಾತರಾಗಿದ್ದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ನಡೆದಾಡಿದ ಪವಿತ್ರ ತಾಣವಾಗಿದೆ. ಸಂಗಮೆಶ್ವರ ಪಾದದಡಿಯಲ್ಲಿ ಹರಿಯುವ ಜುಳುಜುಳು ನಾದಕ್ಕೆ ಮಾಂಜರಾ ಮತ್ತು ದೇವಣಿ ನದಿ ಸಂಗಮವೇ ಈ ಪವಿತ್ರ ಗ್ರಾಮ.

ಇಲ್ಲಿನ ಜನರ ಆಡು ಭಾಷೆ ಕನ್ನಡ. ಗ್ರಾಮಸ್ಥರೆಲ್ಲರೂ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಇಲ್ಲಿ ಸರ್ವಧರ್ಮದ ಜನರ ಸಂಗಮವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದಾರೆ.

392.43 ಹೆಕ್ಟೇರ್ ಭೌಗೋಳಿಕ ಪ್ರದೇಶ. ಸಂಗಮದಿಂದ ಖೇಡ್ ಗ್ರಾ.ಪಂ 1.2 ಕಿ.ಮೀ ದೂರದಲ್ಲಿದೆ. ಕಮಲನಗರ ತಾಲ್ಲೂಕಿನಿಂದ 8 ಕಿ.ಮೀ ಹಾಗೂ ಜಿಲ್ಲಾ ಕೇಂದ್ರದಿಂದ 48 ಕಿ.ಮೀ ಅಂತರದಲ್ಲಿದೆ. ಸುಮಾರು 1295 ಜನಸಂಖ್ಯೆ ಹೊಂದಿದೆ. 261 ಕುಟುಂಬಗಳಿವೆ. ಇಲ್ಲಿನ ಜನಸಂಖ್ಯೆಯಲ್ಲಿ ಶೇ 48.2 ಮಹಿಳೆಯರು ಹಾಗೂ ಶೇ 51.8 ಪ್ರತಿಶತ ಪುರುಷರಿದ್ದಾರೆ. ಇಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಶೇ 61.2 ಇದೆ.

ಪೂರ್ವಕ್ಕೆ ಔರಾದ್, ಪಶ್ಚಿಮಕ್ಕೆ ದೇವಣಿ (ಮಹಾರಾಷ್ಟ್ರ), ಉತ್ತರಕ್ಕೆ ಕಮಲನಗರ ಮತ್ತು ದಕ್ಷಣಕ್ಕೆ ಭಾಲ್ಕಿ ಇದೆ. ಈ ನಾಲ್ಕು ತಾಲ್ಲೂಕುಗಳಿಂದ ಸುತ್ತುವರೆದಿದ್ದು ಇನ್ನೂ ವಿಶೇಷ.

ಗ್ರಾಮದ ಚಿತ್ರಣವೇ ಬದಲು: 1ರಿಂದ 7ನೇ ತರಗತಿಯವರೆಗೆ ಇರುವ ಇಲ್ಲಿನ ಸಕಾರಿ ಶಾಲೆಯಲ್ಲಿ 23 ಗಂಡು ಮತ್ತು 34 ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ. ಸುಣ್ಣ-ಬಣ್ಣ ಹಚ್ಚುವ ಕಾರ್ಯ, ಕಸ ವಿಲೇವಾರಿ, ಬೀದಿ ದೀಪ ಅಳವಡಿಸಲಾಗಿದೆ. ರಸ್ತೆ ಅಭಿವೃದ್ಧಿ ಸೇರಿದಂತೆ ಜಿಲ್ಲಾಧಿಕಾರಿ ಬರುತ್ತಿರುವುದರಿಂದಲೇ ಗ್ರಾಮದ ಚಿತ್ರಣವೇ ಬದಲಾಗಿದೆ.

ಬೇಡಿಕೆ ಮಂಡಿಸಲು ಸಿದ್ಧತೆ

ಕಮಲನಗರ: ‘ನಮ್ಮೂರಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಮಾಡುತ್ತಿರುವುದು ಹರ್ಷ ತಂದಿದೆ. ಗ್ರಾಮದ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳು ಈಡೇರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಗ್ರಾಮದ ಹಿರಿಯರು ಹೇಳಿದರು.

‘ನಮ್ಮ ಶಾಲೆಗೆ ಆವರಣ ಗೋಡೆ, ಹೊಸ ಕೊಠಡಿ, ಶೌಚಾಲಯ, ಡೆಸ್ಕ್ ಸೇರಿದಂತೆ ಮೂಲಸೌಲಭ್ಯಗಳು ಎಲ್ಲವೂ ಇವೆ. ಶಾಲೆ ಹುಲ್ಲುಗಾವಲು ಪ್ರದೇಶದಲ್ಲಿದೆ. ಪಹಣಿಯಲ್ಲಿ ಶಾಲೆ ಹೆಸರು ಸೇರಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎನ್ನುವ ಆಶಾ ಭಾವನೆ ಇದೆ’ ಎಂದು ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಚೌಬಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲಾಡಳಿತವೇ ನಮ್ಮೂರಿಗೆ ಬರುತ್ತಿದೆ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಿಂದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು. ಗ್ರಾಮ ವಾಸ್ತವ್ಯ ಸರ್ಕಾರದ ನಿಯಮ ಪಾಲನೆಯಾಗಿ ಉಳಿಯದೇ; ಜನರ ಬೇಡಿಕೆಯ ಪತ್ರಗಳು ಕಾಗದಲ್ಲೇ ಉಳಿಯಬಾರದು. ಸಮಸ್ಯೆಗಳು ತ್ವರಿತವಾಗಿ ಬಗೆಹರಿಯಬೇಕು’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಪರಮೇಶ್ವರ, ಮಲ್ಲಿಕಾರ್ಜುನ, ಶಾಂತಪ್ಪ, ಅನೀಲಕುಮಾರ.

ಸ್ಥಳದಲ್ಲಿಯೇ ಸಮಸ್ಯೆ ಇತ್ಯರ್ಥ

ಸ್ಥಳದಲ್ಲಿಯೇ ಕೌಂಟರ್ ತೆರೆದು ಆನ್‌ಲೈನ್ ತಂತ್ರಾಂಶದ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಕಂದಾಯ ಇಲಾಖೆಗಳ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಯತ್ನಿಸಲಾಗುವುದು. ಗುರುವಾರ ಬಂದ 17 ಪೈಕಿ 15 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶುಕ್ರವಾರ 6 ಅರ್ಜಿಗಳು ಮತ್ತು 2 ಅರ್ಜಿ ಪಹಣಿ ತಿದ್ದುಪಡಿಗಾಗಿ ಬಂದಿವೆ. ಒಟ್ಟು 25 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇತರೆ ಇಲಾಖೆಯ ಅರ್ಜಿಗಳನ್ನು ಆಯಾ ಇಲಾಖೆಗೆ ರವಾನಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಶಿವಲಿಂಗ ಯರಲಿಂಗ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.