ADVERTISEMENT

ಸಾವಿತ್ರಿಬಾಯಿ ಫುಲೆ ಅಕ್ಷರ ದಾಸೋಹಿ

ಪ್ರಾಚಾರ್ಯೆ ಕಲ್ಪನಾ ದೇಶಪಾಂಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 15:24 IST
Last Updated 3 ಜನವರಿ 2020, 15:24 IST
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌.ಮನೋಹರ ಮಾತನಾಡಿದರು
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌.ಮನೋಹರ ಮಾತನಾಡಿದರು   


ಬೀದರ್‌: ‘ಸಾವಿತ್ರಿಬಾಯಿ ಫುಲೆ ಅಕ್ಷರ ದಾಸೋಹಿಯಾಗಿದ್ದರು’ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯೆ ಕಲ್ಪನಾ ದೇಶಪಾಂಡೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಅವರ 189ನೇ ಜಯಂತಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ನಾವು ಸಾವಿತ್ರಿಬಾಯಿ ಫುಲೆ ಮಕ್ಕಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಮನೆ ಬಿಟ್ಟು ಕರ್ತವ್ಯಕ್ಕೆ ಹೊರಗೆ ಹೋಗಬಾರದು ಎನ್ನುವ ಕಟ್ಟಪ್ಪಣೆ ಇದ್ದರೂ ಲೋಕಕ್ಕೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಮನಗಂಡು ಅಸಂಖ್ಯಾತ ಜನರಿಗೆ ಅಕ್ಷರ ಜ್ಞಾನ ನೀಡಿದ್ದರು. ಮಹಿಳಾ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದರು’ ಎಂದು ನುಡಿದರು.

ADVERTISEMENT

‘ಪುಣೆಯಲ್ಲಿ ‘ಹಮ್ ಸಾವಿತ್ರಿಬಾಯಿ ಕಿ ಬೇಟಿಯಾ’ ಎನ್ನುವ ಸಂಘಟನೆಯೇ ಪ್ರಾರಂಭವಾಗಿದೆ’ ಎಂದು ಹೇಳಿದರು.

‘ಧನಾತ್ಮಕ ವಿಚಾರ, ಆತ್ಮವಿಶ್ವಾಸ, ಧೈರ್ಯ ಅವರಿಗೆ ಪ್ರೇರಣೆಯಾಗಿದ್ದವು. ಪ್ರತಿಯೊಬ್ಬ ಮಹಿಳೆಯರೂ ಫುಲೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಬಿ.ಕಂಬಾರ, ಪ್ರಭಾ ಎಕಲಾರಕರ್ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಗೀತಾ ಪೋಸ್ತೆ ಸ್ವಾಗತಿಸಿದರು. ಪದ್ಮಿನಿ ಕಾಜಿ ವಂದಿಸಿದರು.

***


ಶೈಕ್ಷಣಿಕ ಕ್ಷೇತ್ರದ ಧ್ರುವತಾರೆ: ಮೈಲಾರೆ

ಹುಮನಾಬಾದ್‌: ‘ಸಾವಿತ್ರಿಬಾಯಿ ಫುಲೆ ಸ್ತ್ರೀ ಕುಲದ ಹೆಮ್ಮೆ, ಶೈಕ್ಷಣಿಕ ಕ್ಷೇತ್ರದ ಧ್ರುವತಾರೆಯಾಗಿದ್ದರು’ ಎಂದು ಪ್ರಾಚಾರ್ಯ ಹಣಮಂತರಾವ್ ಮೈಲಾರೆ ಹೇಳಿದರು.
ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕರಾದ ಚಂದ್ರಶೇಖರ ರಡ್ಡಿ, ವೈಜಿನಾಥ ಮಡಕೆ, ರವಿ ಕಲ್ಯಾಣಿ, ಚಂದ್ರಕಲಾ ಪಾಟೀಲ ಇದ್ದರು.

.........

ತಾಯ್ತನದ ಪ್ರೀತಿಯ ಪ್ರತೀಕ ಫುಲೆ

ಬೀದರ್: ‘ಮಹಿಳೆಯರಿಗೆ ಶಿಕ್ಷಣ ಕೊಡಲೇಬೇಕೆಂದು ಪಣ ತೊಟ್ಟು, ಹೋರಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ತಾಯ್ತನದ ಪ್ರೀತಿಯ ಪ್ರತೀಕ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ನಗರದ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಿಕ್ಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾವಿತ್ರಿಬಾಯಿ ಫುಲೆ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಅವರು ಇಡೀ ಮಹಿಳಾ ಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಮಾತನಾಡಿ, ‘ಸಾವಿತ್ರಿಬಾಯಿ ಮೂಲಭೂತವಾದಿಗಳನ್ನು ಎದುರು ಹಾಕಿಕೊಂಡು ಮಹಿಳೆಯರು, ಶೋಷಿತರು, ದಲಿತರಿಗೆ ಶಿಕ್ಷಣ ನೀಡಿದ್ದರು’ ಎಂದು ನುಡಿದರು.
‘ಸಾವಿತ್ರಿಬಾಯಿ ಅವರ ಜಯಂತಿಯನ್ನು ಶಿಕ್ಷಕಿಯರ ದಿನವೆಂದು ಆಚರಿಸುತ್ತಿರುವುದು ಸಂತಸ ತಂದಿದೆ’ ಎಂದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್, ಶ್ರೀದೇವಿ ಮೇತ್ರೆ, ಮಹೇಶ ಬಿರಾದಾರ, ಸುನೀಲ ರೆಡ್ಡಿ, ಎಂ.ರಾಸೂರ ಇದ್ದರು.
ಪ್ರಾಚಾರ್ಯ ಬಸವರಾಜ ಬಲ್ಲೂರ ಸ್ವಾಗತಿಸಿದರು. ಉಪನ್ಯಾಸಕ ಸಚಿನ ವಿಶ್ವಕರ್ಮ ನಿರೂಪಿಸಿದರು. ಪ್ರೊ.ಜಗನ್ನಾಥ ಕಮಲಾಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.