ಬೀದರ್: ಬೆಂಗಳೂರಿನ ಪಿಸಿ ಆ್ಯಂಡ್ ಪಿಎನ್‌ಡಿಟಿ ಉಪನಿರ್ದೇಶಕರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಕಾಯ್ದೆ ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿದ್ದ ಮೂರು ಸ್ಕ್ಯಾನಿಂಗ್ ಕೇಂದ್ರಗಳನ್ನು ಶುಕ್ರವಾರ ಸೀಜ್ ಮಾಡಿದ್ದಾರೆ.
ಬಸವಕಲ್ಯಾಣ ನಗರದ ನ್ಯೂ ರೀಫಾ ಆಸ್ಪತ್ರೆ, ಔರಾದ್ (ಬಿ) ಪಟ್ಟಣದ ವಿಶ್ವ ಮತ್ತು ಮುಗಳೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಭಾಲ್ಕಿ ಪಟ್ಟಣದ ಜೀಜಾಮಾತಾ ಆಸ್ಪತ್ರೆಗಳನ್ನು ಸೀಜ್ ಮಾಡಲಾಗಿದೆ. ಈ ಮೂರೂ ಕೇಂದ್ರಗಳು ಪಿ.ಸಿ. ಆ್ಯಂಡ್ ಪಿ.ಎನ್.ಡಿ.ಟಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕಾರಣ ಸೀಜ್ ಮಾಡಿ, ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ್ (ಬಿ) ಪಟ್ಟಣದ ಒಟ್ಟು ಎಂಟು ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಜಿಲ್ಲಾ ಪಿ.ಸಿ. ಆ್ಯಂಡ್ ಪಿ.ಎನ್.ಡಿ.ಟಿ. ನೋಡಲ್ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ವಸಂತಕುಮಾರ, ಕಾನೂನು ಸಲಹೆಗಾರ ಮೋನಿಶಾ ಡಿ.ಎನ್., ದ್ವಿತೀಯ ದರ್ಜೆ ಸಹಾಯಕ ಅನಿಲ್ ಥಾಮಸ್, ಸಲಹೆಗಾರ ಬನಾಮಾ ಎಸ್. ಸಜ್ಜನ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ಡಾ. ಅಬ್ರಾರ ಖಾದ್ರಿ, ರೇಡಿಯಾಲಜಿಸ್ಟ್ ಡಾ. ಅಶೋಕ ಕಟ್ಟಿಮನಿ, ವಿಷಯ ನಿರ್ವಾಹಕ ಮಹೇಶ್ವರ ರಡ್ಡಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.