ADVERTISEMENT

ಬೀದರ್ | ಸೌಕರ್ಯದ ನಿರೀಕ್ಷೆಯಲ್ಲಿ ಮನ್ನಳ್ಳಿ ಕಾಲೇಜು

ಅಗತ್ಯ ತರಗತಿ ಕೋಣೆಗಳು, ವ್ಯಾಯಾಮ ಸಲಕರಣೆ ಕೊರತೆ

ನಾಗೇಶ ಪ್ರಭಾ
Published 30 ಡಿಸೆಂಬರ್ 2021, 5:47 IST
Last Updated 30 ಡಿಸೆಂಬರ್ 2021, 5:47 IST
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಜನವಾಡ: ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೌಕರ್ಯಗಳ ನಿರೀಕ್ಷೆಯಲ್ಲಿ ಇದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಕಾಲೇಜಿನಲ್ಲಿ ಅಗತ್ಯ ತರಗತಿ ಕೋಣೆಗಳು ಇಲ್ಲ. ಕೋವಿಡ್ ಕಾರಣ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಇನ್ನಷ್ಟು ಡೋಲ್‍ಡೆಸ್ಕ್‌ಗಳ ಅವಶ್ಯಕತೆ ಇದೆ. ಬೇಡಿಕೆ ಇದ್ದರೂ ವಿದ್ಯಾರ್ಥಿಗಳಿಗೆ ವ್ಯಾಯಾಮ ಸಲಕರಣೆಗಳು ಇಲ್ಲ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುರುವಾದ ಮೊದಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ನುವ ಹಿರಿಮೆ ಇದಕ್ಕಿದೆ. ವರ್ಷದ ಹಿಂದಷ್ಟೇ ಗ್ರಾಮೀಣ ಪ್ರದೇಶದ ಎರಡನೇ ವಸತಿ ಸಹಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಘೋಡಂಪಳ್ಳಿಯಲ್ಲಿಆರಂಭಗೊಂಡಿದೆ.

ADVERTISEMENT

2007ರಲ್ಲಿ ಪ್ರಾರಂಭಗೊಂಡ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿದೆ. ಕಾಲೇಜಿನ ಮುಖ್ಯ ಕಟ್ಟಡ 2011 ರಲ್ಲಿ ನಿರ್ಮಾಣಗೊಂಡಿದೆ. ನಂತರ ಎರಡು ಕಟ್ಟಡಗಳು ನಿರ್ಮಾಣಗೊಂಡಿವೆ.

ಭೌತವಿಜ್ಞಾನ ಪ್ರಯೋಗಾಲಯ, ಗಣಕ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಪ್ರಾಚಾರ್ಯರ ಕಚೇರಿ, ಉಪನ್ಯಾಸಕರ ಕೋಣೆ, ತರಗತಿ ಕೋಣೆಗಳು ಸೇರಿದಂತೆ ಒಟ್ಟು 19 ಕೋಣೆಗಳು ಇವೆ. ಆಟದ ಮೈದಾನ, ಪ್ರತ್ಯೇಕ ಶೌಚಾಲಯಗಳು ಇವೆ. ಕುಡಿಯುವ ನೀರಿಗೂ ಸಮಸ್ಯೆ ಇಲ್ಲ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್‍ಗಳು ಇದ್ದು, ಒಟ್ಟು 273 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಇವೆ. ಕಾಲೇಜಿನ ವಿದ್ಯಾರ್ಥಿಗಳು ಪಠ್ಯ, ಸಹ ಪಠ್ಯ ಚಟುವಟಿಕೆಗಳೆರಡರಲ್ಲೂ ಮುಂಚೂಣಿಯಲ್ಲಿದ್ದಾರೆ. ಬಿ.ಎ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಎರಡು ಚಿನ್ನದ ಪದಕ ಗಳಿಸಿ ಗಮನ ಸೆಳೆದಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಅನೇಕ ಬಾರಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡಗಳಿಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾರೆ.

ಗುಣಮಟ್ಟದ ಶಿಕ್ಷಣದ ಕಾರಣ ಕಾಲೇಜು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಪಾಲಕರ ವಿಶ್ವಾಸ ಗಳಿಸಿದೆ. ಮನ್ನಳ್ಳಿ, ತಡಪಳ್ಳಿ, ಪಾತರಪಳ್ಳಿ, ಹೊಕ್ರಾಣ(ಬಿ), ರಾಜಗೀರಾ, ಭಂಗೂರ, ಬೇಮಳಖೇಡ, ಯಾಕತಪುರ, ನಾಗೂರಾ, ಕುತ್ತಾಬಾದ್, ಗೌಸಪುರ, ಚಿಂತಲಗೇರಾ, ಸಿಂದೋಲ್, ಸಿಂದೋಲ್ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗಕ್ಕೆ ಬರುತ್ತಾರೆ ಎಂದು ಹೇಳುತ್ತಾರೆ ಮನ್ನಳ್ಳಿಯ ಪಾಲಕ ಆಜಂ ಅಲಿ.

ಕಾಲೇಜಿನಲ್ಲಿ ಇನ್ನೂ ಮೂರು ಹೊಸ ತರಗತಿ ಕೋಣೆಗಳನ್ನು ನಿರ್ಮಿಸಬೇಕು. ಕೋವಿಡ್ ಇನ್ನೂ ಸಂಪೂರ್ಣ ತೊಲಗಿಲ್ಲ. ಸುರಕ್ಷತಾ ನಿಯಮಗಳ ಪಾಲನೆ ಅಗತ್ಯವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು 50 ಡೋಲ್‍ಡೆಸ್ಕ್‌ಗಳನ್ನು ಒದಗಿಸಬೇಕು ಎಂದು ರಾಜಗೀರಾದ ಮುಖಂಡ ಶಿವಕುಮಾರ ಯದಲಾಪುರೆ ಒತ್ತಾಯಿಸುತ್ತಾರೆ.

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ದೈಹಿಕ ಸದೃಢತೆ ಕಾಯ್ದುಕೊಳ್ಳುವುದಕ್ಕೆ ನೆರವಾಗುವುದೂ ಅವಶ್ಯಕವಾಗಿದೆ. ಹೀಗಾಗಿ ಶಾಲೆಗೆ ವ್ಯಾಯಾಮ ಸಲಕರಣೆಗಳನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.